ʼಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು...ʼ: ಚೈತ್ರಾ ಕುಂದಾಪರ ಜೊತೆಗಿದ್ದ ಯತ್ನಾಳ್, ಆರಗ ಜ್ಞಾನೇಂದ್ರ ಅವರ ಫೋಟೊ ಹಂಚಿಕೊಂಡ ಕಾಂಗ್ರೆಸ್

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿರುವ ಆರೋಪದಡಿ ಬಂಧನಕ್ಕೊಳಕಾದ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರಾ ಕುಂದಾಪುರ ಜೊತೆಗಿದ್ದ ಬಿಜೆಪಿ ಶಾಸಕ ಯತ್ನಾಳ್ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಫೋಟೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ʼʼಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಟಿಕೆಟ್ ಗೆ 7 ಕೋಟಿ ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ..ʼʼ ಎಂದು ಉಲ್ಲೇಖಿಸಿದೆ.
ʼʼಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ, PSI ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು, ರೌಡಿ ಶೀಟರ್ ಗಳೂ ಬಿಜೆಪಿಗರಿಗೆ ಆಪ್ತರು, ಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ?ʼʼ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ʼʼಮಾಜಿ ಗೃಹಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ ಆರಗ ಜ್ಞಾನೇಂದ್ರ ಅವರೇ? ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರ ಜ್ಞಾನೇಂದ್ರರಿಗೆ ಪರಮಾಪ್ತರು. ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ? ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆʼʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.







