2028 ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್ (Photo: X/@DKShivakumar)
ತುಮಕೂರು: "2028ಕ್ಕೆ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಜನತಾದಳ ಹಾಗೂ ಬಿಜೆಪಿಯವರು ಇದನ್ನು ಬರೆದಿಟ್ಟುಕೊಳ್ಳಿ. ಜನರು ಕೂಡ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಂಗಳವಾರ ನಡೆದ 'ಸಾರ್ಥಕ ಸೇವೆಯ ಸಮರ್ಪಣೆ' ಸಮಾವೇಶದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
"ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ಇಡೀ ದೇಶಕ್ಕೆ ಒಂದು ಮಾದರಿ ಸರ್ಕಾರವನ್ನು ಕೊಟ್ಟಿದೆ, ಅದನ್ನು ಉಳಿಸಿಕೊಂಡು ಹೋಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಇರಲಿ. ಪರಿಶ್ರಮ ಇದ್ದ ಕಡೆ ಇತಿಹಾಸ ಸೃಷ್ಟಿ ಆಗುತ್ತದೆ. ನಂಬಿಕೆ ಇದ್ದ ಕಡೆ ಅದ್ಭುತಗಳು ನಡೆಯುತ್ತವೆ. ಸತ್ಯ ಇದ್ದ ಕಡೆ ಗೆಲುವು ಇದ್ದೇ ಇರುತ್ತದೆ" ಎಂದು ಹೇಳಿದರು.
"ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದವರು ನಡೆಸಿದ ಅಧ್ಯಯನದ ಪ್ರಕಾರ, ಕರ್ನಾಟಕದ ಪಂಚ ಗ್ಯಾರಂಟಿಗಳು ಇಡೀ ವಿಶ್ವದಲ್ಲೇ ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆಯನ್ನು ತಂದಂತಹ ಕಾರ್ಯಕ್ರಮಗಳಾಗಿವೆ. ಇವು ವಿಶ್ವಕ್ಕೆ ಒಂದು ಮಾದರಿ" ಎಂದರು.
ಎಲ್ಲಾ ರಾಜ್ಯಗಳು ಗ್ಯಾರಂಟಿ ಮಾದರಿ ಅನುಸರಿಸುತ್ತಿವೆ:
"ನಮ್ಮ ಬಿಜೆಪಿ ಸ್ನೇಹಿತರುಗಳು, ಪ್ರಧಾನಮಂತ್ರಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆಗಳ ಸುರಿಮಳೆಯನ್ನೇ ಮಾಡಿದರು. ಇವತ್ತು ಪ್ರತಿಯೊಂದು ರಾಜ್ಯದಲ್ಲೂ ಅವರೇ ಗ್ಯಾರಂಟಿ ಯೋಜನೆ ಪ್ರಕಟಿಸುತ್ತಿದ್ದಾರೆ. ಯಾವುದೇ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ" ಎಂದರು.
"ನಾವು ಅಂದು ಜನಸಾಮಾನ್ಯರ ಜೀವನ ಉಳಿಯಬೇಕು ಎಂದು ಬದ್ದತೆಯಿಂದ ಕೆಲಸ ಮಾಡಿದೆವು. ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಆದಾಯ ಪಾತಾಳಕ್ಕೆ ಇಳಿದಿದೆ. ಇಂತಹದಕ್ಕೆ ಸಹಾಯ ಮಾಡಬೇಕು ಅಂತಲೇ ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದೆವು. ಈಗ ವಿರೋಧ ಪಕ್ಷಗಳು ಸಹ ನಮ್ಮ ಜನಪರ ಗ್ಯಾರಂಟಿ ಮಾದರಿಯನ್ನೇ ಅನುಸರಿಸುತ್ತಿವೆ" ಎಂದರು.
"ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಜೊತೆಗೆ ಬಿಜೆಪಿ ಸರ್ಕಾರ ಇರೋ ರಾಜ್ಯಗಳು, ಎಲ್ಲಾ ಸರ್ಕಾರಗಳು ಕೂಡ ನಮ್ಮ ಗ್ಯಾರಂಟಿಗಳನ್ನೇ ಅನುಸರಿಸುತ್ತಿವೆ. ಅವರ ಚುನಾವಣೆ ಜಯಕ್ಕೆ ನಮ್ಮ ಗ್ಯಾರಂಟಿಗಳೇ ಸ್ಫೂರ್ತಿಯಾಗಿವೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಆ ಟೀಕೆ ನಾವು ಯಾವತ್ತೂ ತಲೆ ಕೆಡಿಸಿಕೊಳ್ಳಲ್ಲ. ಏಕೆಂದರೆ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಮಾತ್ರ ಉಳಿಯುತ್ತವೆ. ನಮ್ಮನ್ನ ಟೀಕೆ ಮಾಡುವ ವಿರೋಧ ಪಕ್ಷದವರಿಗೆ ನಮ್ಮ ಕಾರ್ಯಕ್ರಮಗಳೇ ಉತ್ತರ" ಎಂದರು.
"ಆರನೇ ಗ್ಯಾರಂಟಿಯಾಗಿ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ 1,11,11,111 ಜನರಿಗೆ ಭೂಮಿ ಗ್ಯಾರಂಟಿಯನ್ನ ಕೊಟ್ಟಿದ್ದೇವೆ. ಬೆಂಗಳೂರು ನಗರದಲ್ಲಿ 27 ಲಕ್ಷದ ಜನರಿಗೆ ಭೂಮಿ ಗ್ಯಾರಂಟಿಯನ್ನು ನಾವು ಕೊಟ್ಟಿದ್ದೇವೆ. ಬಿಜೆಪಿ, ಜನತಾದಳದ ಸ್ನೇಹಿತರಲ್ಲಿ ಕೆಲವರು ಇದನ್ನು ಟೀಕೆ ಮಾಡ್ತಾ ಇದ್ದಾರೆ. ನಿಮಗೆ ಅವಕಾಶ ಕೊಟ್ಟಿದ್ದಾಗ, ಡಬಲ್ ಎಂಜಿನ್ ಸರ್ಕಾರ ಇದ್ದಾಗ ಇಂತಹ ಜನಪರ ಕೆಲಸವನ್ನು ನೀವು ಏಕೆ ಮಾಡಲು ಆಗಲಿಲ್ಲ. ಕೋವಿಡ್ ವೇಳೆ ಮರಣ ಹೊಂದಿದ, ನರಳಿದ ಜನರಿಗೆ ನಿಮ್ಮ ಕೈಯಲ್ಲಿ ಸರಿಯಾಗಿ ನ್ಯಾಯ ಒದಗಿಸಿಕೊಡಲು ಆಗಲಿಲ್ಲ. ಇತ್ತೀಚೆಗೆ ನಾನು, ಸಿದ್ದರಾಮಯ್ಯನವರು ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿದ್ದೇವೆ. ಶರಣಪ್ರಕಾಶ್ ಪಾಟೀಲರು, ಜಿಲ್ಲಾ ಮಂತ್ರಿಗಳಾದ ವೆಂಕಟೇಶ್ ರವರ ಸಹಕಾರದಿಂದ ಇಡೀ ರಾಜ್ಯದಲ್ಲಿ ಒಂದು ಇತಿಹಾಸವನ್ನು ಸೃಷ್ಟಿ ಮಾಡಿದ್ದೇವೆ" ಎಂದರು.
"ಕಾಂಗ್ರೆಸ್ ಸರ್ಕಾರ ಜನರ ಬದುಕಿನಲ್ಲಿ ಬದಲಾವಣೆಯನ್ನು ತಂದೇ ತರುತ್ತದೆ ಎನ್ನುವ ನಂಬಿಕೆಯಿಂದ 136 ಜನ ಶಾಸಕರನ್ನು ಆಯ್ಕೆ ಮಾಡಿದ್ದೀರಿ. ತುಮಕೂರು ಜಿಲ್ಲೆಯಲ್ಲಿ ಏಳು ಜನ ಶಾಸಕರನ್ನ ಕೊಟ್ಟ ನಿಮ್ಮ ಋಣವನ್ನು ತೀರಿಸಲಿಕ್ಕೆ ಒಂದು ದೊಡ್ಡ ಅವಕಾಶವನ್ನು ನೀಡಿದ್ದೀರಿ" ಎಂದರು.
ಕೊಟ್ಟ ಕುದುರೆ ಏರಲು ಆಗದ ಕುಮಾರಸ್ವಾಮಿ:
"ಮೊನ್ನೆ ತಾನೆ ಕುಮಾರಸ್ವಾಮಿಯವರು ಬೆಂಗಳೂರು ನಗರದಲ್ಲಿ ಬಿ ಖಾತೆಯಿಂದ ಎ ಖಾತೆ ಮಾಡಿಸಬೇಡಿ, ನಮ್ಮ ಸರ್ಕಾರ ಬಂದು ಬಿಡುತ್ತದೆ. ನೀವು ಯಾರೂ ದುಡ್ಡು ಕೊಡಲು ಹೋಗಬೇಡಿ. ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಹಿಂದೆಯೇ ನಾನು ಉತ್ತರ ನೀಡಿದ್ದೆ. ಕೊಟ್ಟ ಕುದುರೆಯನ್ನು ಏರಲು ಆಗದವನು ವೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರ ಕೊಟ್ಟಾಗ ನಿಮಗೇನೂ ಮಾಡುವುದಕ್ಕೆ ಆಗಲಿಲ್ಲ. ಅಧಿಕಾರ ಇಲ್ಲದೆ ಹೋದಾಗ ಬರೀ ಹದಿನೇಳು ಜನರನ್ನು ಇಟ್ಟುಕೊಂಡು ಹರಿತೀನಿ, ಹರಿತೀನಿ, ಹರಿತೀನಿ ಅಂದ್ರೆ, ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಸಾಧ್ಯ ಇಲ್ಲ. ನಿಮ್ಮ ಶಾಸಕರು ವಿಧಾನಸಭೆಯಲ್ಲಿ ಬಡವರ ಬಗ್ಗೆ ಒಂದಿನವೂ ಮಾತಾಡಿಲ್ಲ. ನಿಮ್ಮಲ್ಲಿರುವಂತಹ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ನಿಮ್ಮ ಹತ್ತಿರ ಸಮಯ ಇಲ್ಲ. ಇನ್ನು ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮಾತಾಡುವುದು ಬೇಡ" ಎಂದು ವಾಗ್ದಾಳಿ ನಡೆಸಿದರು.
"ಡಾಲರ್ ಬೆಲೆ ತೊಂಬತ್ತಾರು ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆಯನ್ನು ಮಂಗಳವಾರವೂ (ಇಂದು) ಒಂದು ರೂಪಾಯಿ ಜಾಸ್ತಿ ಮಾಡಿದ್ದಾರೆ. ಇದರ ಬಗ್ಗೆ ಬಿಜೆಪಿ ನಾಯಕರುಗಳು ಯಾಕೆ ಮಾತಾಡ್ತಾ ಇಲ್ಲ? ಸಂಸತ್ ಸದಸ್ಯರು ಯಾಕೆ ದನಿ ಎತ್ತುತ್ತಿಲ್ಲ? ಅಶೋಕ್ ಅವರು, ವಿಜಯೇಂದ್ರ ಅವರು ಯಾಕೆ ಇದರ ಬಗ್ಗೆ ಚರ್ಚೆ ಮಾಡ್ತಾ ಇಲ್ಲ? ಜನರ ಹೊಟ್ಟೆ ಪಾಡಿಗೆ ನಿಮ್ಮ ಉತ್ತರವೇನು" ಎಂದು ವ್ಯಂಗ್ಯವಾಡಿದರು.
"ಶಕ್ತಿ ಯೋಜನೆ ದಾಖಲೆ ಸೃಷ್ಟಿಸಿದೆ. ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಇತಿಹಾಸ ನಿರ್ಮಾಣ ಆಗಿದೆ. ಐದು ಸಾವಿರ ಹೊಸ ಬಸ್ಸನ್ನು ಖರೀದಿ ಮಾಡಿದ್ದಾರೆ. ನನ್ನ ತಾಯಂದಿರು ಆತ್ಮವಿಶ್ವಾಸದಿಂದ ಓಡಾಡುತ್ತಿದ್ದಾರೆ. ದೇವರು ಕೊಟ್ಟಿರೋದು ಎರಡು ಆಯ್ಕೆ, ಒಂದು ಕೊಟ್ಟು ಹೋಗಬೇಕು, ಇಲ್ಲ ಬಿಟ್ಟು ಹೋಗಬೇಕು. ಅದೇರೀತಿ ಅಧಿಕಾರ ಸಿಕ್ಕಿರುವಾಗ ಎಲ್ಲ ಮಂತ್ರಿಗಳು ತಮ್ಮ ಇಲಾಖೆಯಲ್ಲಿ ಒಂದು ದೊಡ್ಡ ಸಾಧನೆಗಳನ್ನು ಮಾಡಿ ಜನರಿಗೆ ಶಕ್ತಿ ತುಂಬಿದ್ದಾರೆ" ಎಂದರು.
"ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟ ಪಕ್ಷ ನಮ್ಮದು. ಇಂತಹ ಒಂದು ಐತಿಹಾಸಿಕವಾದ ಪುಟಕ್ಕೆ ಬಿಜೆಪಿ ಸೇರಲು ಆಗಿಲ್ಲ. ಇದಕ್ಕೆ ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ ಅಂತ ಹೇಳಿ ಪ್ರಾರ್ಥಿಸುತ್ತೇನೆ. ಈ ಕಾರ್ಯಕ್ರಮ ಆಯೋಜಿಸಿದ ಪರಮೇಶ್ವರ್ ಮತ್ತು ಈ ಜಿಲ್ಲೆಯ ಎಲ್ಲಾ ಶಾಸಕರಿಗೆ, ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಹೇಳಿದರು.
"ನಾನು, ಸಿದ್ದರಾಮಯ್ಯನವರು, ನಮ್ಮ ಪಕ್ಷದ ವರಿಷ್ಠರು ಚರ್ಚೆ ಮಾಡಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಪರಮೇಶ್ವರ್ ಅವರನ್ನ ನೇಮಕ ಮಾಡಲಾಯಿತು. ಮೂರು ವರ್ಷಗಳಲ್ಲಿ ನಾವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ತಮಗೆಲ್ಲ ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಮಾತು ಕೊಡುವುದು ಮುಖ್ಯ ಅಲ್ಲ. ಆ ಮಾತನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂಬುದನ್ನು ನಾವು ತೋರಿಸಿದ್ದೇವೆ. ದೇವರು ವರ, ಶಾಪ ಏನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಕೊಟ್ಟಂತ ಅವಕಾಶದಲ್ಲಿ ನೀವು ಸರಿಯಾದ ರೀತಿ ಉಪಯೋಗಿಸಿಕೊಳ್ಳಬೇಕು ಅಂತ ಹೇಳಿ. ಇವತ್ತು ಈ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಿಮಗೆ ಹಕ್ಕು ಪತ್ರಗಳನ್ನು ನೀಡುತ್ತಿದ್ದೇವೆ" ಎಂದರು.
"ಅಧಿಕಾರಿಗಳು ತಮ್ಮ ಅವಧಿಯಲ್ಲಿ ಜನರ ಋಣವನ್ನು ಯಾವ ರೀತಿ ತೀರಿಸಿದ್ದೀರಿ ಅದು ಮುಖ್ಯ. ನೀವು ಯಾರನ್ನೂ ಕೂಡ ಮೆಚ್ಚಿಸುವ ಅವಶ್ಯಕತೆ ಇಲ್ಲ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ದುಡಿದಿದ್ದೀರಿ. ಹೀಗಾಗಿ ಕೃಷ್ಣ ಬೈರೇಗೌಡರ ಮುಖಂಡತ್ವದಲ್ಲಿ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರ ಹಾಗೂ ನಾಡಿನ ಜನತೆ ಪರವಾಗಿ ಅವರಿಗೆ ಒಂದು ಕೋಟಿ ನಮಸ್ಕಾರಗಳನ್ನು ಅರ್ಪಿಸಲಿದ್ದೇನೆ" ಎಂದರು.
ಎರಡನೇ ಬೆಂಗಳೂರಾಗಿ ತುಮಕೂರು ಅಭಿವೃದ್ಧಿ:
"ಬೆಂಗಳೂರು ಬಿಟ್ಟರೆ ತುಮಕೂರಿಗೆ ಒಂದು ದೊಡ್ಡ ಇತಿಹಾಸ. ಶಿಕ್ಷಣ ಕಾಶಿ, ಕಲ್ಪತರು ನಾಡು, ಧಾರ್ಮಿಕ, ಐತಿಹಾಸಿಕ, ದಕ್ಷಿಣದ ಕಾಶಿಯಂತೆ ಕಂಗೊಳಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ನೀಡಿದಂತಹ ಒಂದು ಪವಿತ್ರವಾದಂತಹ ಭೂಮಿ. ಸಹೋದ್ಯೋಗಿ ಪರಮೇಶ್ವರ್ ಅವರು, ಬೆಂಗಳೂರಿನ ಜನಸಂಖ್ಯೆ ನಿಯಂತ್ರಣ ಮಾಡಬೇಕಾದರೆ ಇರುವುದು ಒಂದೇ ಉಪಾಯ ಉತ್ತರ ಭಾಗದಲ್ಲಿ ಇರುವ ತುಮಕೂರನ್ನು ಎರಡನೇ ಬೆಂಗಳೂರಾಗಿ ಪರಿವರ್ತನೆ ಮಾಡಬೇಕು ಎಂದಿದ್ದಾರೆ" ಎಂದರು.






