ʼಗ್ಯಾರಂಟಿʼಗಳಿಂದ ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆದ್ದಿದೆ: ಬಿ.ವೈ. ವಿಜಯೇಂದ್ರ

ಬೆಂಗಳೂರು: ‘ಎರಡೂ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದಿದೆ. ನಿಮ್ಮ ಗೆಲುವಿಗೆ ಗ್ಯಾರಂಟಿ ಯೋಜನೆಗಳು ಸಹಕರಿಸಿವೆ. ಗ್ಯಾರಂಟಿ ಹಣ ಬಿಡುಗಡೆ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತಿದ್ದೀರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಗೆಲುವಿನ ನಾಗಾಲೋಟ ಬಹಳ ದಿನ ನಡೆಯಲು ಸಾಧ್ಯವಿಲ್ಲ. ಹಿಂದೆಯೂ ಕಾಂಗ್ರೆಸ್ ಅಧಿಕಾರದಲ್ಲಿ ವೇಳೆ ನಂಜನಗೂಡು, ಬೇರೆ ಉಪ ಚುನಾವಣಾ ಫಲಿತಾಂಶ ಏನಾಗಿತ್ತು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಿದ್ದನ್ನು ಮರೆತಿಲ್ಲ ಎಂದು ತಿರುಗೇಟು ನೀಡಿದರು.
ಗ್ಯಾರಂಟಿಗಳನ್ನು ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ ಈ ಸರಕಾರದಿಂದ ಆಗುತ್ತಿದೆ. ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ 3 ವರ್ಷಗಳಲ್ಲಿ ರಸ್ತೆ, ನೀರಾವರಿ ಯೋಜನೆ, ಆಸ್ಪತ್ರೆಗಳು, ಶಾಲೆಗಳಿಗೆ ಸರಕಾರ ಆದ್ಯತೆ ನೀಡಿದೆಯೇ? ಎಂದು ಅವರು ಪ್ರಶ್ನಿಸಿದರು.
ಯಾವ ಪರುಷಾರ್ಥಕ್ಕೆ ಸಾಧನೆ:
ಸಿಎಂ ಸಿದ್ದರಾಮಯ್ಯನವರೇ ಯಾವ ಪುರುಷಾರ್ಥಕ್ಕೆ ನೀವು ತುಮಕೂರಿನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದೀರಿ. ಮೂರು ವರ್ಷಗಳಲ್ಲಿ ತಾವು ಮಾಡಿದ ಸಾಧನೆಯಾದರೂ ಏನು?. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆಯೇ? ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೀರಾ? ಎಂದು ಕೇಳಿದರು.
ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ:
ಇವರ ಯೋಗ್ಯತೆಗೆ ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯ ಆಗುತ್ತಿಲ್ಲ. ಕೃಷಿ ಕ್ಷೇತ್ರದ ಬಗ್ಗೆ ಈ ಸರಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸಂಕಷ್ಟದಲ್ಲಿ ಇರುವ ರೈತರಿಗೆ ಸಾಂತ್ವನ ಹೇಳುವ ಸಂವೇದನೆ ಈ ಸರಕಾರಕ್ಕೆ ಇಲ್ಲ ಎಂಬುದು ದುರ್ದೈವ ಎಂದು ಟೀಕಿಸಿದರು.






