ಕ್ಷೇತ್ರಗಳ ಮರುವಿಂಗಡಣೆ ಮಾಡದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ
ಎಸ್ಐಆರ್ ರದ್ದು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಆಗ್ರಹ; ಅ. 24ರಂದು ಇಂಡಿಯಾ ಒಕ್ಕೂಟದ ಸಭೆ

ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬುಧವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಒಟ್ಟಿಗೆ ಕುಳಿತು ಚರ್ಚಿಸಲಿ. ರಿಜಿಜು ಅವರಿಗೆ ಸಂಪೂರ್ಣ ಅಧಿಕಾರವಿಲ್ಲ. ಮೋದಿ ಮತ್ತು ಅಮಿತ್ ಶಾ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ನಿಜವಾಗಿಯೂ ಅವರಿಗೆ ಸಂಪೂರ್ಣ ಅಧಿಕಾರವಿದ್ದರೆ, ನಾಳೆಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲಿ. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಈಗಾಗಲೇ ಈ ಮಸೂದೆಗೆ ಬೆಂಬಲ ನೀಡಿದ್ದೇವೆ. ಹಾಗಿರುವಾಗ ಕ್ಷೇತ್ರಗಳ ಮರುವಿಂಗಡಣೆಯ ನಂತರ ಮೀಸಲಾತಿ ಜಾರಿಗೊಳಿಸುವುದೇಕೆ? ಎಂದು ಪ್ರಶ್ನಿಸಿದರು.
ಮೋದಿ ಮತ್ತು ಅಮಿತ್ ಶಾ ಸುಳ್ಳು ಹೇಳುವ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಲ್ಲಿಕಾರ್ಜುನ ಖರ್ಗೆ, ಅವರ ಮುಂದಿನ ಯೋಜನೆಗಳು ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ಯಲಿವೆ. ಯುವಕರಿಗೆ ಉದ್ಯೋಗ ಕಲ್ಪಿಸುವುದು, ವಿವಿಧ ಯೋಜನೆಗಳಿಗೆ ಅನುದಾನ ಒದಗಿಸಿ ಅವುಗಳನ್ನು ಉಳಿಸುವುದು ಸರಕಾರದ ಆದ್ಯತೆಯಾಗಬೇಕು. ಅನುದಾನದ ಕೊರತೆಯಿಂದ ಹಲವು ವಿಶ್ವವಿದ್ಯಾಲಯಗಳು ಸಂಕಷ್ಟ ಎದುರಿಸುತ್ತಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಬೇರೆ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತಿದೆ. ದೇಶವನ್ನು ಉಳಿಸಲು ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಎಸ್ಐಆರ್ ರದ್ದುಪಡಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು. ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ದೇಶಾದ್ಯಂತ ಬಿಜೆಪಿ ಹಾಗೂ ಮೋದಿ ನೇತೃತ್ವದ ಸರಕಾರಕ್ಕೆ ಅನುಕೂಲವಾಗುವಂತೆ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂತಹ ಅಕ್ರಮಗಳಿಗೆ ಸಾಥ್ ಕೊಟ್ಟಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. 2023ರ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಟೀಕಿಸುವುದೇ ಬಿಜೆಪಿಯ ಕೆಲಸವೇ?
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ನಾಯಕರು ನಿರಂತರವಾಗಿ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಎಂಟು ಸಾವಿರ ಜನರು ಭಾಗವಹಿಸಿದರೆ ಏನಾಗುತ್ತದೆ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಲಕ್ಷಾಂತರ ಜನರನ್ನು ಸೇರಿಸಿ ಗಲಾಟೆ ಮಾಡಿ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಬೇಕೇ ಎಂದು ಖರ್ಗೆ ಪ್ರಶ್ನಿಸಿದರು.
ಜನರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಪ್ರತಿಭಟನೆಗಳನ್ನು ನಡೆಸಲಾಗುತ್ತದೆ. ಒಂದೆಡೆ 8ರಿಂದ 10 ಸಾವಿರ ಜನರು ಸೇರಿದರೆ ನಮಗೆ ಭಯವಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಆದರೆ, ದೇಶದ ಕೋಟ್ಯಂತರ ಜನರು ಒಟ್ಟಾಗಿ ಪ್ರತಿಭಟನೆ ನಡೆಸಿದರೆ ಅದನ್ನು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.
ನೆಹರೂ, ಇಂದಿರಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಟೀಕಿಸುವುದನ್ನೇ ಎಷ್ಟು ದಿನ ಮುಂದುವರಿಸುತ್ತೀರಿ? ರಾಜೀವ್ ಗಾಂಧಿ ಅವರ ನಂತರ ಅವರ ಕುಟುಂಬದ ಯಾರಾದರೂ ಪ್ರಧಾನಿಯಾಗಿದ್ದಾರೆಯೇ ಅಥವಾ ಸಚಿವರಾಗಿದ್ದಾರೆಯೇ? ಟೀಕೆ ಮಾಡುವುದನ್ನು ಬಿಟ್ಟು ದೇಶಕ್ಕೆ ಒಳ್ಳೆಯ ಕೆಲಸ ಮಾಡಲಿ ಎಂದು ಖರ್ಗೆ ಹೇಳಿದರು.
ಅ. 24ರಂದು ಇಂಡಿಯಾ ಒಕ್ಕೂಟದ ಸಭೆ
ಅಕ್ಟೋಬರ್ 24ರಂದು ಇಂಡಿಯಾ ಒಕ್ಕೂಟದ ಸಭೆ ನಡೆಯಲಿದ್ದು, ಮುಂದಿನ ಕಾರ್ಯಕ್ರಮಗಳು ಹಾಗೂ ಹೋರಾಟಗಳ ಕುರಿತು ಚರ್ಚಿಸಲಾಗುವುದು ಎಂದು ಖರ್ಗೆ ತಿಳಿಸಿದರು.
2023ರಲ್ಲಿ ಪ್ರತಿಪಕ್ಷಗಳನ್ನು ಹೊರಗಿಟ್ಟು ಸಂಸತ್ತಿನಲ್ಲಿ ಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ಒದಗಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಮೋದಿ ಅವರನ್ನು ರಕ್ಷಿಸಿದ ಚುನಾವಣಾ ಆಯುಕ್ತರನ್ನು ರಕ್ಷಿಸಲು ಈ ಕಾಯ್ದೆ ತರಲಾಗಿದೆ ಎಂದು ಅವರು ಟೀಕಿಸಿದರು.
ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಇಲ್ಲದಂತಹ ಹಕ್ಕುಗಳನ್ನು ಚುನಾವಣಾ ಆಯುಕ್ತರಿಗೆ ನೀಡಿರುವುದೇಕೆ ಎಂದು ಪ್ರಶ್ನಿಸಿದ ಖರ್ಗೆ, ಪ್ರಧಾನಿ ಮೋದಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಸರ್ವಾಧಿಕಾರ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
2023ರ ಕಾಯ್ದೆಗೆ ಬೆಂಬಲ ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು, ಎನ್ಡಿಎ ಮೈತ್ರಿಕೂಟದಲ್ಲಿದ್ದಾಗ ಆ ಕಾಯ್ದೆಯನ್ನು ಬೆಂಬಲಿಸಿ ತಪ್ಪು ಮಾಡಿದ್ದೇನೆ, ಜನರು ಕ್ಷಮಿಸಬೇಕು ಎಂದು ಹೇಳುತ್ತಿದ್ದಾರೆ. ಈ ಕಾಯ್ದೆಗೆ ಬೆಂಬಲ ನೀಡಿದ್ದ ಇತರರೂ ಈಗ ತಮ್ಮ ನಿಲುವಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.






