‘ಕ್ವಾಂಟಮ್ ಕ್ಷೇತ್ರ’ದ ಅಭಿವೃದ್ದಿಗೆ ಸರಕಾರದಿಂದ ಹೆಚ್ಚಿನ ಸಹಕಾರ: ಸಚಿವ ಭೋಸರಾಜು
ಶೀಘ್ರದಲ್ಲೇ ಕೈಗಾರಿಕೆ ಹಾಗೂ ಐಟಿಬಿಟಿ ಸಚಿವರೊಂದಿಗೆ ಸಭೆ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು
ಬೆಂಗಳೂರು: ದೇಶದಲ್ಲೇ ಮೊದಲ ಕ್ವಾಂಟಮ್ ಕಂಪ್ಯೂಟರ್ ನಿರ್ಮಾಣದ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನ ಹೊಂದಿದೆ. ಈ ಕ್ಷೇತ್ರದ ಹೆಚ್ಚಿನ ಅಭಿವೃದ್ದಿ ಅಗತ್ಯವಿರುವಂತಹ ಸಹಕಾರ ನೀಡಲು ಸರಕಾರ ಸಿದ್ದವಿದ್ದು ಹೊಸ ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದ ಕಚೇರಿಯಲ್ಲಿ ರಾಜ್ಯದ ಕ್ವಾಂಟಮ್ ಕ್ಷೇತ್ರದ ಪ್ರಮುಖ ಕಂಪೆನಿಗಳಾದ ಕ್ಯೂಪೈ ಎಐ, ತಕ್ಷೈ ಲ್ಯಾಬ್ಸ್ ಸೇರಿದಂತೆ ಇತರ ಕಂಪೆನಿಗಳ ಪ್ರತಿನಿಧಿಗೊಳೊಂದಿಗೆ ಸಭೆ ನಡೆಸಿ ವಿಸ್ತ್ರುತ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಈ ಬಗ್ಗೆ ಶೀಘ್ರದಲ್ಲೇ ಬೃಹತ್ ಕೈಗಾರಿಕೆ ಹಾಗೂ ಐಟಿ-ಬಿಟಿ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಕ್ವಾಂಟಮ್ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಹಲವಾರು ಸಾಧನೆಗಳನ್ನು ಕರ್ನಾಟಕ ಸಾಧಿಸಿದೆ. ದೇಶದ ಮೊದಲ ಕ್ವಾಂಟ್ಮ್ ಕಂಪ್ಯೂಟರ್ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ದಿಗೊಂಡಿದ್ದು, ಕಾರ್ಯ ನಿರ್ವಹಿಸುತ್ತಿದೆ. ಸರಕಾರ ಕ್ವಾಂಟಮ್ ಇನ್ನೋವೇಷನ್ ಎಕೋಸಿಸ್ಟಮ್ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುತ್ತಿದೆ. ಅಲ್ಲದೇ, ಐಐಎಸ್ಸಿ, ಆರ್ಆರ್ಐ, ಐಸಿಟಿಎಸ್ನಂತಹ ಜಾಗತಿಕ ಸಂಶೋಧನಾ ಸಂಸ್ಥೆಗಳ ಜೊತೆಗೂಡಿ ಸಂಶೋಧನೆಯನ್ನು ಪ್ರಾರಂಭಿಸಿದೆ.
ಹಾಗೆಯೇ, ನಮ್ಮ ರಾಜ್ಯದಲ್ಲಿರುವಂತಹ ಪ್ರಮುಖ ಸಾರ್ವಜನಿಕ ರಕ್ಷಣಾ ಕಂಪೆನಿಗಳು ಕ್ವಾಂಟಮ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಇಂತಹ ಅವಕಾಶಗಳು ದೇಶದ ಬೇರೆ ರಾಜ್ಯಗಳಲ್ಲಿ ಕಡಿಮೆ. ಈ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ಸರಕಾರ ಅಗತ್ಯ ಸಹಕಾರ ನೀಡುತ್ತಿದೆ. ಇಂದು ನಡೆದ ಸಭೆಯಲ್ಲಿ ಕಂಪೆನಿಗಳ ಪ್ರತಿನಿಧಿಗಳು ಅವರಿಗೆ ಸರಕಾರದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಹೊಸ ನೀತಿಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆ ನಡೆಸಲಾಗುವುದು ಎಂದ ಅವರು, ಸಚಿವರೊಂದಿಗಿನ ಸಭೆಯಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವಂತಹ ಹೊಸ ನೀತಿ ಸೇರಿದಂತೆ ಮುಂದಿನ ರೋಡ್ ಮ್ಯಾಪ್ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೆಸ್ಟೆಪ್ಸ್ ನಿರ್ದೇಶಕ ಸದಾಶಿವ ಪ್ರಭು, ಕ್ಯೂಪೈಎಐ ಸಿಇಒ ನಾಗೇಂದ್ರ ನಾಗರಾಜ, ಕನಿಷ್ಕ, ಕೆಎಸ್ಟಿಎ ಅಧ್ಯಕ್ಷ ಪ್ರೊ.ರಾಜಸಾಹೇಬ್, ಸದಸ್ಯ ಕೃಷ್ಣಮೂರ್ತಿ, ಹಿರಿಯ ಕೆಎಎಸ್ ಅಧಿಕಾರಿ ವೀರಭದ್ರ ಹಂಚಿನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







