ನಿಗಮ-ಮಂಡಳಿ ನೇಮಕಾತಿಗಳಲ್ಲಿ RSS ಹಿನ್ನೆಲೆಯವರಿಗೆ ಮಣೆ; ಸರಕಾರದ ಸೈದ್ಧಾಂತಿಕ ಬದ್ಧತೆ ಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು!

ಸುಶೀಲ್ ಕುಮಾರ್ ಪತ್ತಾರ್/ಲೀಲಾಧರ ಠಾಕೂರ್
ಬೆಂಗಳೂರು : ಪಕ್ಷಕ್ಕಾಗಿ ವರ್ಷಗಳಿಂದ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ ಆರೆಸ್ಸೆಸ್ ಮತ್ತು ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ಬುಧವಾರ ಪ್ರಕಟವಾದ ನಿಗಮ ಮಂಡಳಿ ನೇಮಕಾತಿಗಳ ಪಟ್ಟಿಯಲ್ಲಿ ಅಥಣಿ ತಾಲೂಕಿನ ಮಾಜಿ ಆರೆಸ್ಸೆಸ್ ಕಾರ್ಯಕರ್ತ ಸುಶೀಲ್ ಕುಮಾರ್ ಪತ್ತಾರ್ ಅವರನ್ನು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಚಿತ್ರದುರ್ಗದ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಮಾಜಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಲೀಲಾಧರ ಠಾಕೂರ್ ಅವರನ್ನು ರೇಷ್ಮೆ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಸುಶೀಲ್ ಕುಮಾರ್ ಪತ್ತಾರ್ ಅವರು, ಸಚಿವ ಲಕ್ಷಣ ಸವದಿ ಅವರ ಆಪ್ತರಾಗಿದ್ದು, 2023ರ ವಿಧಾನಸಭಾ ಚುನಾವಣೆಗೂ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. 2023ರಲ್ಲಿ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಅವರೊಂದಿಗೆ ಪತ್ತಾರ್ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಪತ್ತಾರ್ ನೇಮಕಾತಿಯ ಹಿಂದೆ ಸಚಿವ ಸವದಿ ಅವರ ಲಾಬಿ ನಡೆದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಲೀಲಾಧರ ಠಾಕೂರ್ ಹಾಗೂ ಸುಶೀಲ್ ಕುಮಾರ್ ಪತ್ತಾರ್ ಅವರು ಆರೆಸ್ಸೆಸ್ ಸಮವಸ್ತ್ರದಲ್ಲಿರುವ ಚಿತ್ರಗಳನ್ನೂ, ಕಾಂಗ್ರೆಸ್ ಸರ್ಕಾರದ ನೇಮಕಾತಿ ಆದೇಶ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಲವರು ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ಅವರಿಗೆ ವ್ಯಂಗ್ಯವಾಗಿ ಧನ್ಯವಾದಗಳನ್ನು ಅರ್ಪಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಹಿಂದೆ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಮತ್ತು ಬಿಜೆಪಿ ನಗರ ಘಟಕದಲ್ಲಿ ಜವಾಬ್ದಾರಿ ನಿರ್ವಹಿಸಿದ್ದ ವ್ಯಕ್ತಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿಗಮದ ನಿರ್ದೇಶಕ ಸ್ಥಾನ ಒಲಿದಿರುವುದು ಚಿತ್ರದುರ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಇದಲ್ಲದೆ, ಬಿ.ಎಚ್. ಮಂಜುನಾಥ್ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನ ನೀಡಲಾಗಿದೆ. ಇವರು ಈ ಹಿಂದೆ ದಿಲ್ಲಿಯ ಎಐಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಬಿಜೆಪಿ ಕಾರ್ಯಕರ್ತ ಎಂಬ ಆರೋಪವೂ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಕೇಳಿಬಂದಿದೆ.
ನಿಗಮ-ಮಂಡಳಿಗಳ ನೇಮಕಾತಿಯ ವಿವಾದದ ನಡುವೆಯೇ ಚಿತ್ರದುರ್ಗದಲ್ಲಿ ಮಕ್ಕಳ ಕಲ್ಯಾಣ ಸಮಿತಿ (CWC) ಅಧ್ಯಕ್ಷರ ನೇಮಕಾತಿಯ ಬಗ್ಗೆಯೂ ಆಕ್ಷೇಪಗಳು ಕೇಳಿಬರುತ್ತಿವೆ. ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಮಹತ್ವದ ಜವಾಬ್ದಾರಿ ಹೊಂದಿರುವ ಈ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಿನ್ನೆಲೆಯ ಮಹಿಳಾ ಕಾರ್ಯಕರ್ತೆಯನ್ನು ನೇಮಕ ಮಾಡಲಾಗಿದೆ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.
ಈ ನೇಮಕಾತಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳಿಂದ ಪಕ್ಷಕ್ಕಾಗಿ ದುಡಿದರೂ ತಮ್ಮನ್ನು ಗುರುತಿಸುವವರಿಲ್ಲ. ಸಂಘಟನೆ ಕಟ್ಟಲು ಬೆವರು ಸುರಿಸಿದವರಿಗೆ ಸ್ಥಾನಮಾನ ನೀಡುವ ಬದಲು ಬೇರೆ ಪಕ್ಷದ ಹಿನ್ನೆಲೆಯವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಅಳಲು ವ್ಯಕ್ತವಾಗುತ್ತಿದೆ.
'ನಾವೆಲ್ಲ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಪಟ್ಟು ದುಡಿದಿದ್ದರೂ ನಮ್ಮನ್ನು ಕೇಳುವವರಿಲ್ಲ. ಪಕ್ಷದ ಶಾಸಕರು ಮತ್ತು ಮುಖಂಡರ ಇಂತಹ ನಡೆಗಳಿಂದಲೇ ಕಾಂಗ್ರೆಸ್ ಮೇಲೆಳುತ್ತಿಲ್ಲ' ಎಂಬ ಅಸಮಾಧಾನವನ್ನು ಕಾಂಗ್ರೆಸ್ ಬೆಂಬಲಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೊಬ್ಬರು, ಕರ್ನಾಟಕ ಕಾಂಗ್ರೆಸ್ನಲ್ಲಿ ಕಾರ್ಯಕರ್ತರ ಕೊರತೆಯಿದೆಯೇ? ಅಥವಾ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ವಿಶೇಷ ಪ್ರೀತಿಯಿದೆಯೇ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರಿಗೂ ಅಧಿಕಾರದ ಅವಕಾಶ ಕಲ್ಪಿಸುತ್ತಿರುವಾಗ, ಪಕ್ಷಕ್ಕಾಗಿ ನಿರಂತರವಾಗಿ ದುಡಿದವರ ಪರಿಶ್ರಮಕ್ಕೆ ಸಿಗುತ್ತಿರುವ ಮನ್ನಣೆ ಏನು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಇದೇ ಸಿದ್ಧಾಂತದ ಹಿನ್ನೆಲೆಯುಳ್ಳವರಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರದ ಸ್ಥಾನಮಾನ ಕಲ್ಪಿಸುತ್ತಿರುವುದು ಪಕ್ಷದ ಸೈದ್ಧಾಂತಿಕ ನಿಲುವು ಮತ್ತು ಅಧಿಕಾರ ಹಂಚಿಕೆಯ ನಡುವಿನ ವೈರುಧ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.






