ನಟ ಸುದೀಪ್ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ
ಬೆಂಗಳೂರು, ಆ.21: ನಟ ಸುದೀಪ್ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ವಿಧಿಸಿ ಸೋಮವಾರ ಆದೇಶಿಸಿದೆ.
ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ನಿಬರ್ಂಧ ವಿಧಿಸಲು ಕೋರಿ ಸುದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 11ನೆ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ಹೊರಡಿಸಿದರು.
ಅಲ್ಲದೆ, ಪ್ರತಿವಾದಿಗಳಾದ ಚಿತ್ರನಿರ್ಮಾಪಕರಾದ ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ಅವರು, ಅವರ ಸಹವರ್ತಿಗಳು ಮತ್ತಿತರರು ಸೇರಿದಂತೆ ಅರ್ಜಿದಾರ ಸುದೀಪ್ ವಿರುದ್ಧ ಯಾವುದೇ ಮಾನಹಾನಿಕಾರಕ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.
ಪ್ರಕರಣ ಸಂಬಂಧ ಈ ಹಿಂದಿನ ವಿಚಾರಣೆಯಲ್ಲಿ ಸುದೀಪ್ ಅವರು ಇಬ್ಬರೂ ನಿರ್ಮಾಪಕರು ತಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಇದಕ್ಕಾಗಿ 10 ಸಾವಿರ ರೂಪಾಯಿ ದಂಡ ಪಾವತಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಾಸಗಿ ದೂರು ವಿಚಾರವಾಗಿ ಸುದೀಪ್ ಪ್ರಮಾಣೀಕೃತ ಹೇಳಿಕೆ ದಾಖಲಿಸಿದ್ದರು.