ಪ್ರಯಾಣದ ವೆಚ್ಚವನ್ನು ತನ್ನ ಸ್ವಂತ ಹಣದಿಂದಲೇ ಭರಿಸಿಕೊಂಡಿದ್ದಾರೆ: ಆರೋಗ್ಯ ಸಚಿವರ ಆಪ್ತ ಶಾಖೆ ಸ್ಪಷ್ಟನೆ

ಕೆ.ಎ. ಹಿದಾಯತುಲ್ಲಾ
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ. ಹಿದಾಯತುಲ್ಲಾ ಅವರು (ಟಿ.ಪಿ) ವೇಳಾಪಟ್ಟಿ ಹಾಕಿಕೊಂಡು ನಿಯಮಮೀರಿ ಪ್ರವಾಸ ನಡೆಸುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ಕೆ.ಎ. ಹಿದಾಯತುಲ್ಲಾ ಅವರು ತಾನು ಪ್ರಯಾಣಿಸಿದ್ದ, ಪ್ರಯಾಣದ ವೆಚ್ಚ ಭರಿಸಿರುವ ದಾಖಲೆಗಳನ್ನು ನೀಡಿದ್ದಾರೆ.
ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ಸಭಾಪತಿ, ಸಭಾಧ್ಯಕ್ಷರು ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ಆಯಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಳುಹಿಸಿ, ಸಭೆ ನಡೆಸಲು ನಿಯಮದಲ್ಲಿ ಅವಕಾಶವಿದೆ. ಆದರೆ ಸಚಿವರ ಆಪ್ತ ಕಾರ್ಯದರ್ಶಿಗಳು ಈ ರೀತಿ ನಡೆದುಕೊಳ್ಳುವುದು ಕಾನೂನು ಬಾಹಿರ ಎಂದು ವರದಿಯಾಗಿತ್ತು.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ ಹಿದಾಯತುಲ್ಲಾ ಅವರು, ಆರೋಗ್ಯ ಸಚಿವರು ಇಲಾಖಾ ಕಾರ್ಯಕ್ರಮ ಹಾಗೂ ಕೋವಿಡ್, ಇನ್ನಿತರ ಸಭೆಗಳಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ತೆರಳಿದ್ದಾಗಿ ತಿಳಿಸಿದ್ದಾರೆ.
ಸಾರ್ವಜನಿಕರ ಮಾಹಿತಿಗಾಗಿ ಪ್ರವಾಸದ ವೇಳಾ ಪಟ್ಟಿಯನ್ನು ಪ್ರಕಟಿಸಲಾತ್ತು. ಸಚಿವರ ಪಿ.ಎಸ್ ಅವರಿಗೆ ಸರ್ಕಾರದಲ್ಲಿ TA - DA ಕ್ಲೈಮ್ ಮಾಡಿಕೊಳ್ಳಲು ಅವಕಾಶವಿಲ್ಲದ ಕಾರಣ ಯಾವುದೇ ವೆಚ್ವಗಳನ್ನು ಸರ್ಕಾರದಿಂದ ಕ್ಲೈಮ್ ಮಾಡಿಕೊಳ್ಳದೇ ಪ್ರಯಾಣದ ವೆಚ್ಚವನ್ನು ಕೆ.ಎ ಹಿದಾಯತ್ ಅವರು ತನ್ನ ಸ್ವಂತ ಹಣದಿಂದಲೇ ಭರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವರ ಆಪ್ತ ಶಾಖೆ ಮಾಹಿತಿ ನೀಡಿದೆ.
ಜವಾಬ್ದಾರಿಯುತ ಅಧಿಕಾರಿಯಾಗಿ ಉಸ್ತುವಾರಿ ಜಿಲ್ಲೆಗೆ ತೆರಳಿ ಜನರ ಅಹವಾಲು ಸ್ವೀಕರಿಸಿದರೂ, ಅದರಲ್ಲೂ ತಪ್ಪು ಹುಡುಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ದೃಷ್ಟಿಯಿಂದ ಈ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳಿದ್ದಾರೆ.







