ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ: ಖಾವಿ ಕಳಚಿ ರೈಲಿನಲ್ಲಿ ಅಡಗಿದ್ದ ಹಾಲಶ್ರೀ

ಹಾಲಶ್ರೀ
ಬೆಂಗಳೂರು: ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದ ಆರೋಪಿ ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ಸ್ವಾಮೀಜಿ ಒಡಿಶಾದಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಭಯದಲ್ಲಿ ಖಾವಿ ಬಟ್ಟೆ ತೆಗೆದು ಟೀ-ಶರ್ಟ್ ಧರಿಸಿ ಸಾಮಾನ್ಯಂತೆ ರೈಲಿನಲ್ಲಿ ಅಡ್ಡಗಿದ್ದ ಮಾಹಿತಿ ಹೊರಬಿದ್ದಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿ ಹಾಲವೀರಪ್ಪ ಸ್ವಾಮೀಜಿ ಸಹ ದೂರುದಾರರಿಂದ 1.50 ಕೋಟಿ ಪಡೆದಿರುವ ಆರೋಪವಿದ್ದು, ಇದು ಬೆಳಕಿಗೆ ಬಂದ ಬೆನ್ನಲ್ಲೇ ಸ್ವಾಮೀಜಿ ತಲೆಮರೆಸಿಕೊಂಡಿದ್ದರು.
ಅದರಂತೆ ಮಠದಿಂದ ಸ್ವಾಮೀಜಿ ಮೈಸೂರಿಗೆ ಹೋಗಿ ಅಲ್ಲಿನ ಮಠವೊಂದರಲ್ಲಿ ಒಂದು ರಾತ್ರಿ ಕಳೆದು ನಂತರ ಕಾರು ಚಾಲಕನಿಂದ ನಾಲ್ಕು ಹೊಸ ಸಿಮ್ಗಳು ಹಾಗೂ ತಲೆಮರೆಸಿಕೊಳ್ಳಲು ಖರ್ಚಿಗೆ ಬೇಕಾದಂತಹ ಹಣವನ್ನು ತರೆಸಿಕೊಂಡಿದ್ದರು. ನಂತರ ಮೈಸೂರಿನಿಂದ ಹೈದರಾಬಾದ್ಗೆ ಹೋಗಿ ಅಲ್ಲಿಂದ ಶ್ರೀಶೈಲಕ್ಕೆ ತೆರಳಿದ್ದು, ಅಲ್ಲಿಂದಲೂ ಜಾಗ ಬದಲಿಸಿ ಒಡಿಶಾಕ್ಕೆ ಹೋಗಿದ್ದಾರೆ.
ಪ್ರತಿಯೊಂದು ಮೊಬೈಲ್ ಕರೆಗೂ ಮೊಬೈಲ್ ಸಿಮ್ ಬದಲಿಸುತ್ತಿದ್ದರು. ಒಂದು ಸಿಮ್ ಬಳಸಿದ ನಂತರ ಆ ಸಿಮ್ ಅನ್ನು ಮತ್ತೆ ಬಳಸುತ್ತಿರಲಿಲ್ಲ. ಹಾಗಾಗಿ ಇವರ ಬಂಧನ ಪೊಲೀಸರಿಗೆ ತಲೆನೋವಾಗಿತ್ತು. ಬಳಿಕ ತನಿಖಾಧಿಕಾರಿಗಳು ಸ್ವಾಮೀಜಿಯ ಕಾರು ಚಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸ್ವಾಮೀಜಿಯ ಬಗ್ಗೆ ಕೆಲವೊಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಹಾಲಶ್ರೀ ಸ್ವಾಮೀಜಿ ಕರ್ನಾಟಕದ ಆಪ್ತರೊಬ್ಬರಿಗೆ ಕರೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡ ಒಡಿಶಾಗೆ ಹೋಗಿತ್ತು. ಅದು ಗೊತ್ತಾಗುತ್ತಿದ್ದಂತೆ, ಸ್ವಾಮೀಜಿ ಭುವನೇಶ್ವರದಿಂದ ಭೋದ್ ಗಯಾಗೆ ರೈಲಿನಲ್ಲಿ ತೆರಳುತ್ತಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ, ರೈಲು ಪ್ರಯಾಣದ ವೇಳೆಯಲ್ಲೇ ಸ್ವಾಮೀಜಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಮಂಗಳವಾರ ವಿಶೇಷ ತಂಡದ ಸಿಬ್ಬಂದಿ, ಸ್ವಾಮೀಜಿಯನ್ನು ಬೆಂಗಳೂರಿಗೆ ಕರೆತಂದೆ ಇಲ್ಲಿನ ಶಿವಾಜಿಗನರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ವಶಕ್ಕೆ ಪಡೆಯಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
50 ಲಕ್ಷ ರೂ. ತರಿಸಿಕೊಂಡಿದ್ದ ಹಾಲಶ್ರೀ?
ತಲೆಮರೆಸಿಕೊಳ್ಳುವ ಮುನ್ನವೇ ಮೈಸೂರಿನ ಆಶ್ರಮಕ್ಕೆ ಮರಳಿದ ಸ್ವಾಮೀಜಿ ಮಧ್ಯಾಹ್ನದ ಹೊತ್ತು ತನ್ನ ಕಾರು ಚಾಲಕ ನಿಂಗರಾಜುವನ್ನು ಕರೆದು ಪ್ರಣವ್ ಎಂಬಾತನ ಬಳಿಗೆ ಕಳುಹಿಸಿ ಸುಮಾರು 50 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.
ಖಾವಿ ಕಳಚಿಟ್ಟು ಹಾಲಶ್ರೀ ಸುತ್ತಾಟ..!
ಚೈತ್ರಾ ಕುಂದಾಪುರ ಬಂಧನ ಬೆನ್ನಲ್ಲೇ ಸೆಪ್ಟೆಂಬರ್ 11ರ ರಾತ್ರಿ ಹಿರೇಹಡಗಲಿಯಿಂದ ಮೈಸೂರಿಗೆ ತೆರಳಿದ್ದ ಸ್ವಾಮೀಜಿ ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸ ಮಾಡಿದ್ದರು. ಬಳಿಕ ಸೆಪ್ಟೆಂಬರ್ 13ರಂದು ಮೈಸೂರಿನ ಬಸ್ ನಿಲ್ದಾಣ ಮುಂದಿರುವ ಅಪೂರ್ವ ಮೊಬೈಲ್ ಸ್ಟೋರ್ ಗೆ ತೆರಳಿದ್ದ ಸ್ವಾಮೀಜಿ, ನಾಲ್ಕು ಮೊಬೈಲ್ ಹಾಗೂ ನಾಲ್ಕು ಸಿಮ್ ಖರೀದಿದ್ದರು.
ಅದೇ ದಿನ ಮಧ್ಯಾಹ್ನ ಅತ್ಯಾಪ್ತ ಪ್ರಣವ್ನಿಂದ ನಿಂಗರಾಜು ಮೂಲಕ 50 ಲಕ್ಷ ರೂಪಾಯಿ ತರಿಸಿದ್ದ. ನಂತರ ಅದೇ ಕಾರಿನಲ್ಲಿ ನಂಬರ್ ಪ್ಲೇಟ್ ಬದಲಾಯಿಸಿ ಮೈಸೂರುನಿಂದ ಹೈದರಾಬಾದ್ (ಸಿಖಂದರಾಬಾದ್) ಗೆ ತೆರಳಿದ್ದ ಸ್ವಾಮೀಜಿ.ಇತ್ತ ನಿಂಗರಾಜು ವಶಕ್ಕೆ ಪಡೆಯುತಿದ್ದಂತೆ ಶ್ರೀಶೈಲಗೆ ಪರಾರಿಯಾಗಿದ್ದರು ಎನ್ನಲಾಗಿದೆ.
ಇನ್ನೂ, ಪೊಲೀಸರಿಗೆ ಅನುಮಾನ ಬಾರದ ರೀತಿ ಖಾವಿ ಕಳಚಿಟ್ಟು ವೇಷಭೂಷಣ ಬದಲಾಯಿಸಿಕೊಂಡು ಸಂಚರಿಸುತಿದ್ದ ಮಾಹಿತಿ ಗೊತ್ತಾಗಿದ್ದು, ವಶಕ್ಕೆ ಪಡೆಯುವ ವೇಳೆಯೂ ಟೀ ಶರ್ಟ್ನಲ್ಲಿ ಹಾಲಶ್ರೀ ಇದ್ದರು ಎಂದು ತನಿಖಾಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.