ʼಅಡ್ಡ ಮತದಾನʼ | ಕೆಲ ಶಾಸಕರ ಮೇಲೆ ಅನುಮಾನಗಳಿದ್ದು, ಅವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ: ಆರ್. ಅಶೋಕ್

ಆರ್. ಅಶೋಕ್
ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ದ್ರೋಹ ಬಗೆದು ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿರುವ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮುಂದಾಗಿದೆ.
‘ಅಡ್ಡ ಮತದಾನ ನಡೆದಿರುವ ಬಗ್ಗೆ ಸ್ಪಷ್ಟವಾದ ಸುಳಿವು ಸಿಕ್ಕಿದ್ದು, ಈ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ನಾಳೆ(ಜೂ.23) ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯಾಧ್ಯಕ್ಷರ ಭೇಟಿಗೆ ಸಮಯಾವಕಾಶ ಕೇಳಿದ್ದು, ಅವರು ಸಮಯ ನಿಗದಿಪಡಿಸಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಕುರಿತು ತನಿಖೆ ನಡೆಸಲು ಈಗಾಗಲೇ ಪಕ್ಷದ ವತಿಯಿಂದ ಸಮಿತಿ ರಚಿಸಲಾಗಿದ್ದು, ಒಂದೆರಡು ದಿನಗಳಲ್ಲಿ ವರದಿ ಕೈಸೇರಲಿದೆ. ಕೆಲ ಶಾಸಕರ ಮೇಲೆ ಅನುಮಾನಗಳಿದ್ದು, ಅವರ ವಿರುದ್ಧ ವರದಿ ಆಧಾರದ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದರು.
ಅಡ್ಡ ಮತದಾನ ಮಾಡಿದವರು ಕ್ಷೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಯಾರೂ ಇಲ್ಲಿ ಉಚಿತವಾಗಿ ಮತ ಹಾಕಿಲ್ಲ. ಕೋಟಿ ಕೋಟಿ ರೂ.ಗಳಷ್ಟು ಹಣ ಪಡೆದೇ ಈ ಕೆಲಸ ಮಾಡಿದ್ದಾರೆ. ಇದು ಕ್ಷೇತ್ರದ ಅಭಿವೃದ್ಧಿಗಾಗಿ ಅಲ್ಲ, ಕೇವಲ ತಮ್ಮ ಸ್ವಂತ ಅಭಿವೃದ್ಧಿಗಾಗಿ ಮಾಡಿಕೊಂಡಿರುವ ಆಪರೇಷನ್ ಎಂದು ಅಶೋಕ್ ಟೀಕಿಸಿದರು.
ಧರ್ಮಸ್ಥಳಕ್ಕೆ ಬೇಡ: ಪಕ್ಷದ ಹಲವು ಮುಖಂಡರು ಅಡ್ಡ ಮತದಾನದ ವಿಚಾರದಲ್ಲಿ ಶ್ರೀ ಕ್ಷೇತ್ರದ ಧರ್ಮಸ್ಥಳವನ್ನು ರಾಜಕೀಯಕ್ಕೆ ಎಳೆದು ತರುವುದು ಬೇಡ, ಅಲ್ಲಿ ಪ್ರಮಾಣ ಮಾಡಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಧರ್ಮಸ್ಥಳಕ್ಕೆ ಹೋಗುವುದು ಬೇಡ ಎಂದು ತೀರ್ಮಾನ ಮಾಡಿದ್ದೇವೆ ಎಂದು ಅಶೋಕ್ ಹೇಳಿದರು.
ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ನವರೇ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ನಾವು ಅಧಿಕಾರದಲ್ಲಿದ್ದಾಗ ಶಾಸಕರನ್ನು ಸೆಳೆದಾಗ ಅದನ್ನು ‘ಆಪರೇಷನ್ ಕಮಲ’ ಎಂದು ಬೊಬ್ಬೆ ಹೊಡೆದಿದ್ದರು. ಇದೀಗ ಅವರು ಮಾಡಿದ ಕೆಲಸಕ್ಕೆ ‘ಆಪರೇಷನ್ ಹಸ್ತ’ ಅನ್ನಬೇಕಲ್ಲವೇ?. ನೆನಪಿರಲಿ, ರಾಜಕೀಯದಲ್ಲಿ ಇದು ನಿಲ್ಲದು. ಒಂದು ದಿನ ನಿಮಗೆ ತಿರುಬಾಣವಾಗಲಿದೆ ಎಂದು ಅಶೋಕ್ ಎಚ್ಚರಿಸಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬಗ್ಗೆ ಬಿಜೆಪಿಯ ಸಮಿತಿ ವರದಿ ನೀಡಿದ ನಂತರ ಅದನ್ನು ಹೈಕಮಾಂಡ್ ಮುಂದೆ ಇಟ್ಟು ವರಿಷ್ಠರ ಶಿಫಾರಸಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾಜಿ ಸಿಎಂ ಸದಾನಂದ ಗೌಡ ಏನು ಹೇಳಿದ್ದಾರೆಂಬ ವಿವರಗಳು ನನಗೆ ಗೊತ್ತಿಲ್ಲ. ನಾನು ನಾಳೆ ಬೆಂಗಳೂರಿಗೆ ಹೋಗುತ್ತಿದ್ದೇನೆ, ಅಲ್ಲಿ ಅವರೊಂದಿಗೆ ಚರ್ಚಿಸುತ್ತೇನೆ’
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ






