ಶ್ರೀ ಕ್ಷೇತ್ರ ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ಸಿಎಂಗೆ ಸಿ.ಟಿ.ರವಿ ಪತ್ರ

ಸಿ.ಟಿ. ರವಿ
ಬೆಂಗಳೂರು: ‘ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ಧ ನಡೆದಿದೆ ಎನ್ನಲಾಗಿರುವ ಷಡ್ಯಂತ್ರದ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ವಹಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸತ್ಯ ಏನೇ ಇದ್ದರೂ, ಅದು ಹೊರಬರಬೇಕು’ ಎಂದು ಕೋರಿ ಪರಿಷತ್ ಸದಸ್ಯ ಸಿ.ಟಿ.ರವಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಸೋಮವಾರ ಮೂರು ಪುಟಗಳ ಬಹಿರಂಗ ಪತ್ರ ಬರೆದಿರುವ ಸಿ.ಟಿ.ರವಿ, ‘ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದ್ದರೆ ಅದರ ಹಿಂದಿರುವವರು ಯಾರು ಎಂದು ಗೊತ್ತಾಗಬೇಕು. ಆರೋಪಗಳಲ್ಲಿ ಸತ್ಯವಿದ್ದರೆ ಅದೂ ಕಾನೂನಿನ ಮುಂದೆ ಸಾಬೀತಾಗಬೇಕು. ಕೋಟ್ಯಾಂತರ ಭಕ್ತರ ನಂಬಿಕೆ, ಧಾರ್ಮಿಕ ಭಾವನೆ ಮತ್ತು ಸಮಾಜದ ವಿಶ್ವಾಸದ ಪ್ರಶ್ನೆಯಾಗಿರುವ ಕಾರಣ, ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಧರ್ಮಸ್ಥಳ ಜನರ ನಂಬಿಕೆಯ ಧಾರ್ಮಿಕ ಭಾವನೆಗಳ ಕೇಂದ್ರ. ಸಮಾಜ ಸೇವೆ, ಶಿಕ್ಷಣ, ಆರೋಗ್ಯ, ಅನ್ನದಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಧರ್ಮಸ್ಥಳ ಸಲ್ಲಿಸಿರುವ ಸೇವೆ ದೇಶಕ್ಕೆ ಮಾದರಿ. ಇಂತಹ ಸಂಸ್ಥೆ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕೆಲವು ವರ್ಷಗಳಿಂದ ಆರೋಪ, ಅಪಪ್ರಚಾರ ಮಾಡುತ್ತಿರುವುದನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
‘ಇದೀಗ ಹೈಕೋರ್ಟ್ನ ಮುಂದೆ ಸಲ್ಲಿಕೆಯಾಗಿರುವ ಅರ್ಜಿಯು ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ಆಯಾಮವನ್ನು ನೀಡಿದ್ದು, ಮಾಧ್ಯಮ ವರದಿಗಳ ಪ್ರಕಾರ ಆ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ಗೌಡ, ಜಯಂತ್ ಹಾಗೂ ಯೂಟ್ಯೂಬರ್ ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿ ಹಲವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸುಮಾರು 200ಕೋಟಿ ರೂ. ವೆಚ್ಚದಲ್ಲಿ ಸಂಘಟಿತ ಮತ್ತು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಗಂಭೀರ ಆರೋಪವೂ ಕೋರ್ಟ್ ಮುಂದೆ ಬಂದಿದೆ. ಈ ಆರೋಪಗಳು ಸತ್ಯವೋ, ಸುಳ್ಳೋ ಎಂಬುದನ್ನು ತನಿಖೆಯೇ ನಿರ್ಧರಿಸಬೇಕು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಕೋರಿದ್ದಾರೆ.






