ಪಠ್ಯ ಪುಸ್ತಕದಲ್ಲಿ ಸಾಂಸ್ಕೃತಿಕ ದಬ್ಬಾಳಿಕೆ ಅಪಾಯಕಾರಿ: ನಿರಂಜನಾರಾಧ್ಯ ವಿ.ಪಿ.

ನಿರಂಜನಾರಾಧ್ಯ ವಿ.ಪಿ
ಬೆಂಗಳೂರು: ಎನ್ಸಿಇಆರ್ಟಿ ಹೊರತಂದಿರುವ ಆರನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ನೋಡಿದರೆ ಗಾಬರಿಯಾಗುತ್ತದೆ. ಮಕ್ಕಳ ಕಲಿಕೆಗಾಗಿ ರೂಪಿಸಬೇಕಾದ ಪುಸ್ತಕಗಳನ್ನು ರಾಜಕೀಯ-ಸಾಂಸ್ಕೃತಿಕ ದಬ್ಬಾಳಿಕೆಗೆ ಅಸ್ತ್ರವನ್ನಾಗಿಸುವುದು ಅಪಾಯಕಾರಿ ಎಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪ್ರದಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ ತಿಳಿಸಿದ್ದಾರೆ.
ಮಂಗಳವಾರ ಪ್ರಕಟನೆ ನೀಡಿರುವ ಅವರು, ಎನ್ಸಿಇಆರ್ಟಿ ಕನ್ನಡ ಪಠ್ಯ ಪುಸ್ತಕದಲ್ಲಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ ವೈವಿಧ್ಯತೆ ಪ್ರತಿಬಿಂಬಿಸುವ ಪಾಠಗಳಿಲ್ಲ. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು, ಹಳೆಯ ಮೈಸೂರು ಭಾಗದ ಜಾನಪದ, ಸಾಹಿತ್ಯ, ಬದುಕು ಕಾಣೆಯಾಗಿದೆ. 6ನೇ ತರಗತಿ ಮಗುವಿನ ಕುತೂಹಲ, ವಯೋಮಾನಕ್ಕೆ ತಕ್ಕ ಚಟುವಟಿಕೆ, ಪಠ್ಯ, ಚಿತ್ರ, ಕಥೆಗಳಿಲ್ಲ. ನಿರೂಪಣೆ ನೀರಸವಾಗಿದ್ದು ಉಪದೇಶದ ಧಾಟಿಯಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಅಸ್ಮಿತೆ ಅಡಗಿರುವುದು ಪಂಪ, ಕುವೆಂಪು, ಶಿವರಾಮ ಕಾರಂತ, ಬಸವಣ್ಣ ಅವರ ವೈಚಾರಿಕತೆಯಲ್ಲಿ. ಆದರೆ ಎನ್ಸಿಇಆರ್ಟಿ 6ನೇ ತರಗತಿ ಪಠ್ಯ ಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಸಿದೆ. ಸ್ಥಳೀಯ ವೈಚಾರಿಕತೆ, ಸಾಂಸ್ಕೃತಿಕತೆಯನ್ನು ಬದಿಗೊತ್ತಿ, ದೇವರು-ಧರ್ಮದ ರಾಜಕೀಯಕ್ಕೆ ಎನ್ಸಿಇಆರ್ಟಿ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿನ ಕನ್ನಡ ಕಲಿಕಾ ಅಧಿನಿಯಮ 2015ರ ಪ್ರಕಾರ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ದ್ವಿತೀಯ ಭಾಷೆಯಾಗಿ ಕಲಿಸಬೇಕು. ಈಗಾಗಲೇ ಸವಿ ಕನ್ನಡ, ಸಿರಿ ಕನ್ನಡ ಹಾಗೂ ತಿಳಿ ಕನ್ನಡ ಪುಸ್ತಕಗಳಿದ್ದು, ತಿಳಿ ಕನ್ನಡವನ್ನು ಈ ಮೊದಲು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಬಳಸಲಾಗುತ್ತಿತ್ತು. ತಿಳಿ ಕನ್ನಡವನ್ನೇ ತೃತೀಯ ಭಾಷೆಯನ್ನಾಗಿ ಬಳಸಬೇಕು.
ಪುಸ್ತಕದ ಹೆಸರು ‘ಕೃಷ್ಣ’ ಎಂದು ಏಕೆ ಎಂದು ಎನ್ಸಿಇಆರ್ಟಿ ಲಿಖಿತ ಉತ್ತರ ನೀಡಬೇಕು. ಕರ್ನಾಟಕದಲ್ಲಿ ಪಠ್ಯ ರಚನೆ ಹಾಗೂ ಎಲ್ಲಾ ಶೈಕ್ಷಣಿಕ ಕೆಲಸಗಳಿಗೆ ಶೈಕ್ಷಣಿಕ ಪ್ರಾಧಿಕಾರವಾಗಿರುವ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯನ್ನು ಈ ಕಾರ್ಯದಲ್ಲಿ ಏಕೆ ತೊಡಗಿಸಿಕೊಂಡಿಲ್ಲವೆಂಬುದಕ್ಕೆ ಕಾರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ʼಸಮತೋಲನ ಆಹಾರ' ಪಾಠದಲ್ಲಿ ಮೊಟ್ಟೆ, ಮೀನು, ಮಾಂಸದ ಚಿತ್ರ-ಉಲ್ಲೇಖ ಸೇರಿಸಿ ಮರುಮುದ್ರಣ ಮಾಡಬೇಕು. ಪುಸ್ತಕದ ಹೆಸರು ಬದಲಿಸಿ ಕನ್ನಡದ ಅಸ್ಮಿತೆಗೆ ಸರಿ ಹೊಂದುವ ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.






