ಸೈಬರ್ ವಂಚನೆಗಳ ಕಡಿವಾಣಕ್ಕೆ ‘ಸೈಬರ್ ಕಮಾಂಡ್ ಸೆಂಟರ್’ ಸ್ಥಾಪನೆ : ಡಿಜಿಪಿಯಾಗಿ ಪ್ರಣವ್ ಮೊಹಾಂತಿ ನೇಮಕ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ. 13 : ಸೈಬರ್ ವಂಚನೆಗೆ ಕಡಿವಾಣ ಹಾಕಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆ, ಸೆ.8ರಂದು ದೇಶದಲ್ಲೇ ಮೊದಲ ಸೈಬರ್ ಕಮಾಂಡ್ ಸೆಂಟರ್ ಅನ್ನು ಬೆಂಗಳೂರಲ್ಲಿ ಆರಂಭಿಸಲಾಗಿದ್ದು, ಸದ್ಯ ಈಗ ಕಮಾಂಡ್ ಸೆಂಟರ್ಗೆ ಡಿಐಜಿಯಾಗಿ ಶನಿವಾರ ಪ್ರಣವ್ ಮೊಹಾಂತಿ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರಕಾರವು ಸೈಬರ್ ವಂಚಕರ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಸದ್ಯ ಬೆಂಗಳೂರಲ್ಲಿ 45 ಸೈಬರ್ ಪೊಲೀಸ್ ಠಾಣೆಗಳಿವೆ. ಜೊತೆಗೆ ಸಹಾಯವಾಣಿ ಸಂಖ್ಯೆ 1930 ನಿಂದಲೂ ಕೂಡ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಇನ್ನು ಮುಂದೆ ಸೈಬರ್ ಠಾಣೆಗಳು ಮತ್ತು 1930 ದಲ್ಲಿ ದಾಖಲಾದ ದೂರುಗಳನ್ನು ಸೈಬರ್ ಕಮಾಂಡ್ ಸೆಂಟರ್ ನಿರ್ವಹಣೆ ಮಾಡಲಾಗುವುದು. ದೂರು ದಾಖಲಿಸುವುದರ ಜೊತೆಗೆ ತನಿಖಾ ವರದಿಯನ್ನು ಕೂಡ ಸಲ್ಲಿಕೆ ಮಾಡಲಾಗುತ್ತದೆ.
ಸದ್ಯ ರಾಜ್ಯದಲ್ಲಿ 16,000ಕ್ಕೂ ಹೆಚ್ಚಿನ ಪ್ರಕರಣಗಳೂ ಇತ್ಯರ್ಥವಾಗದೆ ಬಾಕಿ ಉಳಿದಿದೆ. ಅಲ್ಲದೇ ಇಷ್ಟು ದಿನ ಪೊಲೀಸರು ಕಾನೂನು ಸುವ್ಯವಸ್ಥೆ ಜೊತೆಗೆ ಸೈಬರ್ ಪ್ರಕರಣಗಳ ತನಿಖೆಯನ್ನೂ ಮಾಡಬೇಕಿತ್ತು. ಆದರೆ, ಪೊಲೀಸರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ, ಸರಿಯಾದ ರೀತಿಯಲ್ಲಿ ಪ್ರಕರಣ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಸೈಬರ್ ಕಮಾಂಡ್ ಸೆಂಟರ್ ರಚನೆ ಆದ ಬಳಿಕ ಕೇವಲ ಸೈಬರ್ ಪ್ರಕರಣಗಳಿಗೆ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಅಲ್ಲದೆ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







