ಕೋರ್ಟ್ ಆದೇಶ ಉಲ್ಲಂಘಿಸಿ ದರ್ಶನ್ ವಿರುದ್ಧ ಸುದ್ದಿ ಪ್ರಸಾರ; ತಪ್ಪಿತಸ್ಥ ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ

ದರ್ಶನ್
ಬೆಂಗಳೂರು : ನ್ಯಾಯಾಂಗದ ಆದೇಶಗಳನ್ನು ಉಲ್ಲಂಘಿಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ವಿರುದ್ಧ ಸುದ್ದಿ ವರದಿ ಮಾಡಿರುವ ಮಾಧ್ಯಮಗಳಿಗೆ ದಂಡ ವಿಧಿಸಿ, ಪರವಾನಗಿ ರದ್ದುಪಡಿಸುವ ಕ್ರಮಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ಹೊರಡಿಸಿರುವ ನಿರ್ಬಂಧಕಾದೇಶ ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.
ಮಾಧ್ಯಮಗಳು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, 2024ರಲ್ಲೇ ನ್ಯಾಯಾಲಯ ವಿಚಿತ್ರ ವರದಿಗಾರಿಕೆಯ ಬಗ್ಗೆ ಎಚ್ಚರಿಸಿದೆ. ಇದನ್ನು ಉಲ್ಲಂಘಿಸಿ ವರದಿ ಮಾಡುತ್ತಿರುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಮಾಧ್ಯಮಗಳಿಗೆ ಎಚ್ಚರಿಸಿದೆ.
ಸಕ್ಷಮ ಪ್ರಾಧಿಕಾರಗಳು ಕ್ರಮಕೈಗೊಳ್ಳದಿರುವುದು ಸ್ವೇಚ್ಛೆಯ ಕ್ರಮವಾಗಿದ್ದು, ಅಸಮರ್ಥನೀಯ. ಮೇಲ್ನೋಟಕ್ಕೆ ಕಾನೂನು ಮತ್ತು ನ್ಯಾಯಾಂಗದ ಆದೇಶಗಳ ಉಲ್ಲಂಘನೆ ಕಾಣುತ್ತದೆ. ಮಾಧ್ಯಮಗಳ ವಿಚಾರಣೆಯು ದರ್ಶನ್ ಅವರ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಗಂಭೀರ ಹಾನಿ ಉಂಟು ಮಾಡಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅನುಪಾಲನಾ ವರದಿ ಸಲ್ಲಿಸಲು ನಿರ್ದೇಶನ:
ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯ್ದೆಯ ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಲಾಗಿರುವ ದರ್ಶನ್ ಅವರಿಗೆ ಸಂಬಂಧಿಸಿದ ಕಂಟೆಂಟ್ಗಳನ್ನು ತೆಗೆದು ಹಾಕಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ನಿರ್ದೇಶಿಸಬೇಕು. ಆದೇಶ ಉಲ್ಲಂಘಿಸುವ ಮಾಧ್ಯಮಗಳಿಗೆ ದಂಡ ವಿಧಿಸಬೇಕು. ಅವರ ಪರವಾನಗಿ ರದ್ದುಪಡಿಸುವ ಜತೆಗೆ ಕಾನೂನಿನ ಅನ್ವಯ ಸೂಕ್ತ ಪ್ರಕ್ರಿಯೆ ಆರಂಭಿಸಬೇಕು ಎಂದು ಆದೇಶಿಸಿರುವ ನ್ಯಾಯಪೀಠ, ಈ ಸಂಬಂಧಿತ ಅನುಪಾಲನಾ ವರದಿಯನ್ನು ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಕೋರ್ಟ್ ಕಿಡಿ:
ವಿದ್ಯುನ್ಮಾನ ಮಾಧ್ಯಮಗಳು ನ್ಯಾಯಾಲಯದಲ್ಲಿ ಕಲಾಪವನ್ನು ಮರುರೂಪಿಸುವ ಮಟ್ಟಕ್ಕೆ ಹೋಗಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಮುಖವನ್ನು ಮರೆಮಾಚಲಾಗಿದೆ. ಉಳಿದಂತೆ ಆರೋಪಿಗಳು ಮತ್ತು ವಕೀಲರ ಮುಖವನ್ನು ಮುಕ್ತವಾಗಿ ಪ್ರಸಾರ ಮಾಡುತ್ತಿವೆ. ಪ್ರತಿದಿನದ ವಿಚಾರಣೆಯಂದು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ವಿಚಾರಣೆಗೆ ಬಾಕಿ ಇರುವ ನ್ಯಾಯಾಂಗ ಪ್ರಕ್ರಿಯೆಯನ್ನು ಒಂದು ರೀತಿ ಸಾರ್ವಜನಿಕ ಪ್ರದರ್ಶನವನ್ನಾಗಿಸಿವೆ ಎಂದು ನ್ಯಾಯಪೀಠ ಅತೃಪ್ತಿ ಹೊರ ಹಾಕಿದೆ.
ವಿಚಾರಣೆಯ ಮುಖ್ಯಾಂಶಗಳ ಗಡಿರೇಖೆ ಹೊಂದಿರುವ ಇಂತಹ ಪ್ರಸಾರಗಳನ್ನು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುವ ವ್ಯವಸ್ಥೆಯಲ್ಲಿ, ವಿಶೇಷವಾಗಿ ಜಾರಿಯಾಗಿರುವ ನ್ಯಾಯಾಲಯದ ತಡೆಯಾಜ್ಞೆಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ, ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ರೀತಿಯಲ್ಲಿ ಪ್ರಸಾರ ಮಾಡಿದಾಗ ಅವುಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಹೇಳಿದೆ.
ನ್ಯಾಯಯುತ ವಿಚಾರಣೆಗೆ ಧಕ್ಕೆ:
ಮಾಧ್ಯಮ ವರದಿಗಳು ನ್ಯಾಯಾಂಗ ನಿರ್ಣಯವನ್ನು ಬದಲಾಯಿಸಲು ಅನುಮತಿಸಲಾಗದು. ನ್ಯಾಯಾಲಯದ ದೃಶ್ಯಗಳನ್ನು ವಾಸ್ತವಿಕವಾಗಿ ಪ್ರದರ್ಶಿಸುವ ಮೂಲಕ ಮತ್ತು ಆಯ್ದ ನಿರೂಪಣೆಗಳನ್ನು ಬಿಂಬಿಸುವ ಮೂಲಕ, ಮಾಧ್ಯಮಗಳು ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಕೆಲಸದಲ್ಲಿ ನಿರತವಾಗಿದ್ದು, ದರ್ಶನ್ ಅವರ ನ್ಯಾಯಯುತ ವಿಚಾರಣೆಯ ಹಕ್ಕನ್ನು ದುರ್ಬಲಗೊಳಿಸಿವೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.






