ದಾವಣಗೆರೆ | ಜೈಲಿನ ಆವರಣ ಗೋಡೆ ಜಿಗಿದು ಪರಾರಿಯಾಗಿದ್ದ ಅತ್ಯಾಚಾರ ಪ್ರಕರಣದ ಆರೋಪಿಯ ಸೆರೆ
ದಾವಣಗೆರೆ: ಇಲ್ಲಿನ ಉಪ ಕಾರಾಗೃಹದಿಂದ ಪರಾರಿಯಾಗಿದ್ದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಕರೂರ ಪ್ರದೇಶದ ನಿವಾಸಿ ವಸಂತ (23) ಪರಾರಿಯಾಗಿದ್ದ ಆರೋಪಿ. ಈತ ವೃತ್ತಿಯಲ್ಲಿ ಆಟೊ ಚಾಲಕ. ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ರವಿವಾರ ಆರೋಪಿಯು ಉಪ ಕಾರಾಗೃಹದ ಗೋಡೆ ಜಿಗಿದು ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎತ್ತರದ ಗೋಡೆಯಿಂದ ಜಿಗಿದ ವೇಳೆ ಕಾಲಿಗೆ ಪೆಟ್ಟಾಗಿದೆ. ಆದರೆ, ಅದನ್ನು ಲೆಕ್ಕಿಸದೆ ಆರೋಪಿ ಓಡಿ ಹೋಗಿದ್ದಾನೆ. ನಾಪತ್ತೆಯಾದ ಕೆಲ ಹೊತ್ತಿನ ಬಳಿಕ ಜೈಲು ಸಿಬ್ಬಂದಿಗೆ ಮಾಹಿತಿ ದೊರೆತಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾರ್ಯ ಪೃವೃತ್ತರಾದ ಪೊಲೀಸರು ರವಿವಾರ ಸಂಜೆ ವೇಳೆ ಆರೋಪಿಯನ್ನು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story