ಕಾಂಗ್ರೆಸ್ ಸರಕಾರಕ್ಕೆ ಎರಡು ವರ್ಷ | ಗೊಲ್ಲರಹಟ್ಟಿ, ತಾಂಡಾಗಳ 1 ಲಕ್ಷ ಜನರಿಗೆ ಪಟ್ಟಾ ಖಾತೆ : ಡಿಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ, ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ರಾಮನಗರದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ‘ಯುವ ಪರ್ವ' ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಯುವಕರಿಗೆ ಯುವನಿಧಿ ಮೂಲಕ ನೆರವಿಗೆ ನಿಂತಿದೆ. ಮಹಿಳೆಯರ ಪರವಾಗಿ ಐತಿಹಾಸಿಕ ಯೋಜನೆಗಳನ್ನು ತಂದು ಇತಿಹಾಸ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಪಕ್ಷ. ಉಚಿತ ಬಸ್, ಗೃಹಲಕ್ಷ್ಮೀ ಸೇರಿದಂತೆ ಅನೇಕ ಯೋಜನೆಗಳನ್ನು ಜೆಡಿಎಸ್, ಬಿಜೆಪಿಯವರು ನೀಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ಪಕ್ಷ ನಾಯಕತ್ವ ಬೆಳೆಸುವ ಪ್ರಯೋಗ ಶಾಲೆ. ನೀವು ನಾಯಕರಾಗಿ ಬೆಳೆಯಬೇಕು ಎಂದರೆ ತಳಮಟ್ಟದಿಂದ ಕೆಲಸ ಮಾಡಬೇಕು. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಯುವಕರಿಗೆ ನಿಮ್ಮ ಶಕ್ತಿಯ ಅರಿವಿಲ್ಲ. ಯಾರೋ ಮಾಡುವ ಟೀಕೆಗಳಿಗೆ ಹೆದರಬಾರದು ಎಂದ ಅವರು, ನಿಮ್ಮ ಏರಿಯಾ, ಬೂತ್ ಮಟ್ಟದಲ್ಲಿ ನೀವು ಪ್ರಬಲವಾಗಿ ಬೆಳೆಯಬೇಕು. ನೀವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಜನರ ಮನಸ್ಸನ್ನು ಗೆಲ್ಲಬೇಕು. ನಿಮ್ಮನ್ನು ನಾಯಕರನ್ನಾಗಿ ರೂಪಿಸಬೇಕು ಎನ್ನುವುದು ನನ್ನ ಗುರಿ, ಹಿಂಬಾಲಕರನ್ನಾಗಿ ಮಾಡುವುದಲ್ಲ. ನೀವು ನನ್ನ ಸಹಪಾಠಿಗಳು ಎಂದರು.
ಯುವ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಬೆಳೆದವರು ಪಕ್ಷವನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಬೂತ್, ಪಂಚಾಯತಿ, ವಾರ್ಡ್ ಮಟ್ಟದಲ್ಲಿ ನಿಮಗೆ ನೀಡಿದ ಜವಾಬ್ದಾರಿ ನಿಭಾಯಿಸಿದಾಗ, ಪಕ್ಷಕ್ಕೆ ಹೆಚ್ಚಿನ ಮತಗಳನ್ನು ತಂದುಕೊಟ್ಟಾಗ ಮಾತ್ರ ನೀವು ನಾಯಕರಾಗಿ ಹೊರಹೊಮ್ಮಬಹುದು. ಆಗ ಶಾಸಕರು ನಿಮ್ಮನ್ನು ಹುಡುಕಿಕೊಂಡು ಬಂದು ಅಧಿಕಾರ ನೀಡುವ ಕೆಲಸ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ನುಡಿದರು.
ಅಧಿಕಾರ ಎಂದಿಗೂ ಶಾಶ್ವತವಲ್ಲ. ದೇವೇಗೌಡರು ಈ ರಾಜ್ಯದ ಸಿಎಂ ಆಗಿ ನಂತರ ಪ್ರಧಾನಿಯಾದರು. ಅವರಿಂದ ತೆರವಾದ ಸ್ಥಾನಕ್ಕೆ ನಟ ಅಂಬರೀಶ್ ಅವರನ್ನು ನಿಲ್ಲಿಸಿದ್ದರು. ನಾವು ಅಂದು ಹೋರಾಟ ಮಾಡಿ ಸಿ.ಎಂ.ಲಿಂಗಪ್ಪರನ್ನು ನಿಲ್ಲಿಸಿ ಗೆಲ್ಲಿಸಿದೆವು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವೂ ಕ್ಷಣಿಕ. ರಾಮನಗರ, ಮೈಸೂರು, ಮಂಡ್ಯದಲ್ಲಿ ನಾವು ಗೆದ್ದಿಲ್ಲವೇ. ಮೈಸೂರು ಭಾಗದಲ್ಲಿ 40ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಸೋತಿರುವ ಕ್ಷೇತ್ರದಲ್ಲಿ ಮುಂದೆ ಗೆಲ್ಲಲು ಪ್ರಯೋಗ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.
ನಾನು ಶಾಸಕ, ಮಂತ್ರಿ ಆಗಿದ್ದಾಗಲೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಆನಂತರ ರಾಜಿನಾಮೆ ನೀಡಿ ಕೆ.ಆರ್.ಪುರಂ ನಾರಾಯಣಸ್ವಾಮಿ, ಆನೇಕಲ್ ಶಿವಣ್ಣ ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ದೇಶದ ಮೊದಲ ಪ್ರಧಾನಿಗಳಾದ ನೆಹರು ಅಲಹಾಬಾದ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯನವರು ಬೆಂಗಳೂರು ಮುನಿಸಿಪಾಲಿಟಿಯ ಸದಸ್ಯರು, ಅಧ್ಯಕ್ಷರಾಗಿದ್ದರು. ರಾಜಗೋಪಾಲಚಾರಿ, ಬಿ.ಡಿ.ಜತ್ತಿ ಹೀಗೆ ಅನೇಕರು ತಳಮಟ್ಟದಿಂದ ಬೆಳೆದು ನಾಯಕರಾಗಿ ಹೊರಹೊಮ್ಮಿದವರು ಎಂದು ಅವರು ಸ್ಮರಿಸಿದರು.
‘ಒಮ್ಮೆ ರಾಜೀವ್ ಗಾಂಧಿ ಅವರ ಬಳಿ ಸ್ಥಳೀಯ ಸಂಸ್ಥೆ ವ್ಯವಸ್ಥೆ ನಮ್ಮಲ್ಲಿ ಇದೆಯಲ್ಲಾ ಎಂದು ಕೇಳಿದ್ದೆ. ಆಗ ಅವರು ಇಡೀ ದೇಶದಲ್ಲಿ ಈ ವ್ಯವಸ್ಥೆ ಬರಬೇಕು. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೆ ನಾಯಕರ ಉಗಮವಾಗಬೇಕು ಎಂದು ಹೇಳಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಮತ್ತು ಹಿಂದುಳಿದ ವರ್ಗಕ್ಕೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ದೇಶದ ಜನರಿಗೆ ಶಾಲೆ, ಆಸ್ಪತ್ರೆ, ಭೂಮಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡಿದವರು ನಾವು. ಗ್ಯಾರಂಟಿ ಯೋಜನೆಗಳ ಮೂಲಕ ದಾಖಲೆ ಬರೆದಿದ್ದೇವೆ. ಹೊರಗಡೆಯಿಂದ ಬಂದವರಂತೆ ಪ್ರಚಾರಕ್ಕೆ ಏನೋ ಒಂದು ಹೇಳುವವರಲ್ಲ ನಾವು ಎಂದು ಶಿವಕುಮಾರ್ ನುಡಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಯಲು ಮುಂದಾಗಿದ್ದೇವೆ. ಏಕೆಂದರೆ ಇಲ್ಲಿನ ಭೂಮಿ ಮೌಲ್ಯ ಹೆಚ್ಚಾಗಲಿದೆ, ಜನರ ಬದುಕು ಬದಲಾಗಲಿದೆ. ಇದು ನಮ್ಮ ಜಿಲ್ಲೆ, ನಮ್ಮ ಸ್ವಾಭಿಮಾನ. ಬೆಂಗಳೂರಿಗೆ ನಾವು ಹೋಗುವುದು ತಪ್ಪಿ ನಮ್ಮನ್ನೇ ಬಳಸಿಕೊಳ್ಳುವ ಕಾಲ ಮುಂದಕ್ಕೆ ಬರಬೇಕು. ಡಿ.ಕೆ.ಸುರೇಶ್ ಸ್ಪರ್ಧಿಸುವ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಏಕೆ ಕರೆಯಲಾಗುತ್ತದೆ. ನಮ್ಮ ಹೆಸರನ್ನು ಬಿಟ್ಟು ಕೊಡುವುದಿಲ್ಲ ಎಂದು ಅವರು ಹೇಳಿದರು.
‘ಗ್ರೇಟರ್ ಬೆಂಗಳೂರು’ ಎಂದು ಮಾಡಲು ಹೊರಟಿದ್ದೇವೆ. ಇದನ್ನು ಕೈಬಿಡಿ ಎಂದು ದೇವೆಗೌಡ, ಸಂಸದ ಮಂಜುನಾಥ್ ಪತ್ರ ಬರೆದಿದ್ದರು. ಈ ಹಿಂದೆ ಇದಕ್ಕೆ ಸಹಿ ಹಾಕಿದವರು ಕುಮಾರಸ್ವಾಮಿ. ಆದರೆ ಅವರಿಗೆ ಇದನ್ನು ಮುಂದುವರೆಸಲು ಆಗುವುದಿಲ್ಲ. ಈಗ ನಾನೇಕೆ ಅದನ್ನು ಡಿನೋಟಿಫಿಕೇಷನ್ ಮಾಡಲಿ. ಕೇಸನ್ನು ಹಾಕಿಸಿಕೊಳ್ಳಲು ನಾನು ತಯಾರಿಲ್ಲ. ರೈತರಿಗೆ ನಾಲ್ಕು ಪಟ್ಟು ಪರಿಹಾರ ದೊರೆಯುವಂತೆ ಮಾಡುತ್ತೇನೆ. ಯೋಗೇಶ್ವರ್, ಇಕ್ಬಾಲ್ ಹುಸೇನ್ ಅವರೆಲ್ಲಾ ಸೇರಿ ನಿಮ್ಮ ಬದುಕನ್ನು ಭದ್ರ ಮಾಡುತ್ತೇವೆ ಎಂದು ಶಿವಕುಮಾರ್ ಭರವಸೆ ನೀಡಿದರು.
ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲಾಗುತ್ತಿದೆ. ಬೆಂಗಳೂರಿನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿಯೇ ಇಲ್ಲಿಯೂ ನೆರವೇರಿಸಲಾಗುತ್ತದೆ. ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರು ಎಲ್ಲರೂ ಸೇರಿ 50ಲಕ್ಷ ರೂ.ದೇಣಿಗೆ ಸಂಗ್ರಹ ಮಾಡಲಾಗುವುದು ಎಂದು ಹೇಳಿದ್ದಾರೆ. ಕನಕಪುರದಲ್ಲಿ ಇರುವ ಜಾಗವನ್ನು ಹರಾಜಿನಲ್ಲಿ ಮಾರಾಟ ಮಾಡಿ ಆ ಹಣವನ್ನು ರಾಮನಗರ ಕಚೇರಿಗೆ ನೀಡಲಾಗುವುದು ಎಂದು ಹೇಳಿದರು.
ನಾವೊಬ್ಬರೇ ಪಕ್ಷದ ಕಚೇರಿ ಕಟ್ಟಬಹುದು. ಆದರೆ, ಎಲ್ಲರೂ ಕೈ ಜೋಡಿಸಬೇಕು. ಆಗ ಮಾತ್ರ ಇದು ನನ್ನದು, ನನ್ನ ಪಕ್ಷ ಎನ್ನುವ ಅಭಿಮಾನವಿರುತ್ತದೆ. ದಾನಿಗಳ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ದಾನಿಗಳ ಹೆಸರಿರುವ ಫಲಕಗಳನ್ನು ಅಳವಡಿಸಲಾಗುವುದು. ವರ್ಷದೊಳಗೆ ಜಿಲ್ಲಾ ಕಾಂಗ್ರೆಸ್ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಳ್ಳಲಾಗುವುದು. ಕಟ್ಟಡಕ್ಕೆ ದೇಣಿಗೆ ನೀಡುವವರು ಚೆಕ್ ಮುಖಾಂತರ ನೀಡಬೇಕೆಂದು ಮನವಿ. 5 ರಿಂದ 2ಲಕ್ಷ ರೂ.ಒಳಗೆ ಹಣ ನೀಡಿದರೂ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರಾಮನಗರ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡಿರುವ ಚಂದ್ರಸಾಗರ್ ಮತ್ತು ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಈ ವೇಳೆ ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಎಚ್.ಎಂ.ರೇವಣ್ಣ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಡಾ.ರಂಗನಾಥ್, ಪರಿಷತ್ ಸದಸ್ಯ ರವಿ, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಬಿ.ವಿ.ಶ್ರೀನಿವಾಸ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ರಾಜ್ಯ ಸರಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 20ಕ್ಕೆ ಸಂಭ್ರಮಾಚರಣೆ ಮಾಡುವ ಆಲೋಚನೆಯಿದೆ. ಆದರೆ, ಯುದ್ದದ ಭೀತಿ ಹಿನ್ನೆಲೆಯಲ್ಲಿ ಈ ಕುರಿತು ಆಲೋಚನೆ ಮಾಡಲಾಗುತ್ತಿದೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯ ಬಗ್ಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಬೇಕು. ಈ ಕುರಿತು ಪ್ರತಿಕ್ರಿಯೆ ನೀಡಿ ಗೊಂದಲ ಸೃಷ್ಟಿಸಲು ನನಗೆ ಇಷ್ಟವಿಲ್ಲ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ







