ಕಮಲ್ ಹಾಸನ್ ಚಿತ್ರ | ಕೋರ್ಟ್ ಆದೇಶವನ್ನು ಎಲ್ಲರೂ ಗೌರವಿಸಬೇಕು : ಡಿಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಚಿತ್ರನಟ ಕಮಲ್ ಹಾಸನ್ ಚಿತ್ರ ಬಿಡುಗಡೆ ಸಂಬಂಧ ಕೋರ್ಟ್ ನೀಡಿರುವ ಆದೇಶವನ್ನು ಎಲ್ಲರೂ ಗೌರವಿಸಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಮಲ್ ಹಾನಸ್ ಅವರ ಅಭಿಪ್ರಾಯ ಹೇಳುವುದು ತಪ್ಪಲ್ಲ. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದೇವೆ. ಎಲ್ಲ ಜಾತಿ, ಸಂಸ್ಕೃತಿ, ಧರ್ಮಗಳನ್ನು ಬೆಂಗಳೂರು ಅರಗಿಸಿಕೊಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ನಗರ, ಎಲ್ಲರಿಗೂ ಬೇಕಾದ ನಗರ ಎಂದರು.
ಕನ್ನಡದ ಜನರು ಹೃದಯ ಶ್ರೀಮಂತಿಕೆ ತೋರಿಸಿಕೊಂಡು ಬಂದಿದ್ದಾರೆ. ನಮ್ಮ ಸ್ವಾಭಿಮಾನವನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಕನ್ನಡದ ಪರ ನಾವಿದ್ದೇವೆ. ಆದರೆ, ನ್ಯಾಯಲಯದ ತೀರ್ಪಿಗೆ ಗೌರವ ನೀಡಲೇಬೇಕು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಮುಂದಾಗಬಾರದು ಎಂದು ಅವರು ಮನವಿ ಮಾಡಿದರು.
ಆದೇಶವನ್ನು ಗೌರವಿಸುತ್ತೇವೆ: ‘ನಟ ಕಮಲ್ ಹಾಸನ್ ಹೇಳಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡದ ಸ್ವಾಭಿಮಾನದ ವಿಚಾರ ಬಂದಾಗ ಕನ್ನಡದ ಚಿತ್ರಮಂದಿರದ ಮಾಲೀಕರು ಅವರ ಚಿತ್ರಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕನ್ನಡದ ಭಾಷೆ, ನೆಲ ಹಾಗೂ ಜಲದ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರುತ್ತೇವೆ. ನಮ್ಮ ಚಿತ್ರಮಂದಿರದ ಮಾಲಕರು ಹಾಗೂ ಸಿನಿಮಾ ವಿತರಕರು ಹಾಗೂ ವಾಣಿಜ್ಯ ಮಂಡಳಿ ಜೊತೆ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು.







