ರಾಜ್ಯದಲ್ಲಿ 101 ತಾಲ್ಲೂಕುಗಳು ಬರಪೀಡಿತ : ಡಿಸಿಎಂ ಜಿ.ಪರಮೇಶ್ವರ್

ಬೆಂಗಳೂರು : ಹಿಂದಿನ ವರ್ಷ ರಾಜ್ಯದ ಜಲಾಶಯಗಳಲ್ಲಿ ಒಟ್ಟು 815 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಆದರೆ, ಈ ಬಾರಿ ನೀರಿನ ಪ್ರಮಾಣ 684 ಟಿಎಂಸಿ ಅಡಿಗೆ ಕುಸಿದಿದೆ. ಪರಿಣಾಮವಾಗಿ 2,069 ಗ್ರಾಮ ಪಂಚಾಯಿತಿಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ 758 ಗ್ರಾಮಗಳಿಗೆ 149 ಟ್ಯಾಂಕರ್‌ಗಳು ಹಾಗೂ ಬಾಡಿಗೆಗೆ ಪಡೆದ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಕೃಷಿ ಕ್ಷೇತ್ರಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.31 ಹಾಗೂ ಕರಾವಳಿ ಭಾಗದಲ್ಲಿ ಶೇ 24.ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಇವುಗಳಲ್ಲಿ 89 ತಾಲ್ಲೂಕುಗಳಲ್ಲಿ ತೀವ್ರ ಬರ ಹಾಗೂ 12 ತಾಲ್ಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿ ಇದೆ ಎಂದು ಮಾಹಿತಿ ನೀಡಿದ್ದಾರೆ.




