ರಾಜ್ಯಾದ್ಯಂತ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ : ಡಿಸಿಎಂ ಜಿ.ಪರಮೇಶ್ವರ್

ಬೆಂಗಳೂರು : ಮಾರುಕಟ್ಟೆ ದರಕ್ಕೆ ಅನುಗುಣವಾಗಿ ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಕಂದಾಯ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅನುಪಾತದ ಆಧಾರದಲ್ಲಿ ಪರಿಷ್ಕರಿಸುವ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ಈ ಕುರಿತ ವಿಶ್ಲೇಷಣೆ ಪೂರ್ಣಗೊಂಡ ಬಳಿಕ ಯಾವ ಪ್ರದೇಶದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಪ್ರದೇಶವಾರು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಜೀವನ ವೆಚ್ಚ ಹೆಚ್ಚಾಗಿರುವುದರ ಜೊತೆಗೆ ಖಾಸಗಿ ಮಾರುಕಟ್ಟೆಯಲ್ಲಿ ಭೂಮಿಯ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ಉದಾಹರಣೆಗೆ, ಸರಕಾರದ ಮಾರ್ಗಸೂಚಿ ಮೌಲ್ಯದಲ್ಲಿ ಎಕರೆಗೆ 5 ಕೋಟಿ ರೂ. ಇದ್ದರೆ, ಖಾಸಗಿ ಮಾರುಕಟ್ಟೆಯಲ್ಲಿ ಅದರ ಮೌಲ್ಯ 20 ಕೋಟಿ ರೂಪಾಯಿವರೆಗೂ ಇರಬಹುದು. ಇದರಿಂದ ಸರಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅನುಪಾತದ ಆಧಾರದಲ್ಲಿ ಪರಿಷ್ಕರಿಸುವ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ ಯಾವ ಪ್ರದೇಶದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಪ್ರದೇಶವಾರು ನಿರ್ಧರಿಸಲಾಗುವುದು. ಬೆಂಗಳೂರು ನಗರದಲ್ಲಿ ಜಿಬಿಎ, ಬಿಡಿಎ ವ್ಯಾಪ್ತಿಯ ಪ್ರದೇಶಗಳಿಗೆ ಅನುಗುಣವಾಗಿ ಹಾಗೂ ಇತರ ಜಿಲ್ಲೆಗಳಲ್ಲಿ ತಾಲೂಕು ಅಥವಾ ಪಂಚಾಯಿತಿ ಮಟ್ಟದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸುವ ಉದ್ದೇಶವಿದೆ ಎಂದೂ ಅವರು ಹೇಳಿದರು.
ಶಾಸಕರು ಹಾಗೂ ಸಚಿವರಲ್ಲಿ ಅಸಮಾಧಾನವಿದೆ ಎಂಬ ಚರ್ಚೆಯ ಕುರಿತು ಪ್ರತಿಕ್ರಿಯಿಸಿ, ಯಾರಿಗಾದರೂ ಅಸಮಾಧಾನವಿದ್ದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅದನ್ನು ವ್ಯಕ್ತಪಡಿಸಬಹುದು. ಆದರೆ, ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೂ ಯಾವುದೇ ಅಸಮಾಧಾನವನ್ನು ವ್ಯಕ್ತಪಡಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಿದೆ ಎಂಬ ರೀತಿಯಲ್ಲಿ ವಿರೋಧ ಪಕ್ಷದವರು ಅನಗತ್ಯ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ತಮ್ಮ ಮನೆಯಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳದೆ ಬೇರೆಯವರ ಮನೆಯ ದೋಷಗಳನ್ನು ಹುಡುಕುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.






