‘NEET ಪರೀಕ್ಷೆ ವ್ಯವಸ್ಥೆ ಹಿಂಪಡೆದು CET ಮರು ಸ್ಥಾಪಿಸಿ’ : ಪ್ರಧಾನಿ ಮೋದಿಗೆ ಡಿಸಿಎಂ ಜಿ.ಪರಮೇಶ್ವರ್ ಆಗ್ರಹ

ಡಾ.ಜಿ.ಪರಮೇಶ್ವರ್/ನರೇಂದ್ರ ಮೋದಿ(PC : PTI)
ಬೆಂಗಳೂರು: ದಿಲ್ಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿ ನಡೆಸಿದ್ದರ ಬಗ್ಗೆ ಪ್ರಾಥಮಿಕ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, ನೀಟ್ ಪರೀಕ್ಷೆ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳಿ ಮತ್ತು ಪಾರದರ್ಶಕತೆ ಹಾಗೂ ಅರ್ಹತೆಯ ಆಧಾರದ ಸಿಇಟಿ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವೈಫಲ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಧನ ನೀಡಬೇಕು. ದಿಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್, ಅಶ್ರುವಾಯು ದಾಳಿ ಮತ್ತಿತರ ದಾಳಿಯಿಂದ ಗಾಯಗೊಂಡ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಕೇಂದ್ರ ಸರಕಾರವೆ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕಾಲಮಿತಿಯಲ್ಲಿ ಪಾರದರ್ಶಕ ತನಿಖೆಗೆ ಕ್ರಮ ವಹಿಸಿ, ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಪುನಃ ಸ್ಥಾಪಿಸಬೇಕು. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರೆ ಎಲ್ಲ ಸಂಬಂಧಪಟ್ಟವರ ಜೊತೆ ಅರ್ಥಪೂರ್ಣ ಸಂವಾದ ನಡೆಸಿ, ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕದೆ ಸಹಾನುಭೂತಿ, ಸಂವಾದ ಮತ್ತು ಮುತ್ಸದ್ದಿತನದ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಖಾತ್ರಿ ನೀಡಬೇಕು. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪರೀಕ್ಷಾ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಿಗಿದ್ದ ವಿಶ್ವಾಸಾರ್ಹತೆಯನ್ನು ಮರುಸ್ಥಾಪನೆ ಮಾಡಲು ರಾಷ್ಟ್ರಮಟ್ಟದ ಅಭಿಯಾನವನ್ನು ನಡೆಸಬೇಕು ಎಂದು ಪರಮೇಶ್ವರ್ ಒತ್ತಾಯಿಸಿದ್ದಾರೆ.
ಮುಖ್ಯವಾಗಿ ಯುವಕರು ಸೇರಿದಂತೆ ನಾಗರಿಕರಿಗಿರುವ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಬದ್ಧತೆಯನ್ನು ಮರುಸ್ಥಾಪಿಸಬೇಕು. ಸಾರ್ವಜನಿಕ ಪ್ರತಿನಿಧಿಗಳಾಗಿ ನಾವು ಅವರಿಗೆ ನೀಡುವ ಭರವಸೆಗಳಿಗಿಂತ ಹೆಚ್ಚು ಋಣಿಯಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
ಯುವಕರು ನಮ್ಮಿಂದ ಸವಲತ್ತು ಅಥವಾ ಉಪಕಾರ ಬೇಡುತ್ತಿಲ್ಲ. ಅವರು ಕೇವಲ ವಿಶ್ವಾಸಾರ್ಹ ಸಂಸ್ಥೆಗಳು, ನ್ಯಾಯಯುತ ಅವಕಾಶಗಳು ಮತ್ತು ಜನರ ಧ್ವನಿಯನ್ನು ಆಲಿಸುವ ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದಾರೆ ಎಂದು ಗಮನ ಸೆಳೆದಿರುವ ಪರಮೇಶ್ವರ್, ನಿಮ್ಮ ಸರಕಾರವು ಭಾರತದ ಯುವಜನತೆಯ ಆಕಾಂಕ್ಷೆಗಳನ್ನು ರಾಷ್ಟ್ರೀಯ ವಿಚಾರವಾಗಿ ಪರಿಗಣಿಸುತ್ತದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.






