ಪಡಿತರ ಚೀಟಿ ಫಲಾನುಭವಿಗಳ e-KYC ಗಡುವು ನ.10ಕ್ಕೆ ವಿಸ್ತರಣೆ

ಸಾಂದರ್ಭಿಕ ಚಿತ್ರ/Image by gstudioimagen on Magnific
ಬೆಂಗಳೂರು : ಪಡಿತರ ಚೀಟಿ ಫಲಾನುಭವಿಗಳು ಇ-ಕೆವೈಸಿ ದೃಢೀಕರಿಸುವ ದಿನಾಂಕವನ್ನು ನವೆಂಬರ್ 10 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಇ-ಕೆವೈಸಿ ದೃಢೀಕರಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿತ್ತು.
ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಒಂದು ವರ್ಷಕ್ಕೂ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 1,15,87,298 ಫಲಾನುಭವಿಗಳು ಮತ್ತೊಮ್ಮೆ ಇ-ಕೆವೈಸಿ ಮಾಡಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಕೊನೆಯ ದಿನಾಂಕವನ್ನು ನವೆಂಬರ್ 10ರ ವರೆಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಒಂದು ವರ್ಷದ ಹಿಂದೆ ಇ-ಕೆವೈಸಿ ಮಾಡಿಸಿದ ಫಲಾನುಭವಿಗಳ ಜೊತೆಗೆ, ಇದುವರೆಗೆ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3,82,362 ಹಾಗೂ ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 54,27,396 ಫಲಾನುಭವಿಗಳು ಇನ್ನೂ ಇ-ಕೆವೈಸಿ ದೃಢೀಕರಿಸಬೇಕಿದೆ.
ಈ ಎಲ್ಲ ಫಲಾನುಭವಿಗಳು 'ಅನ್ನ ಸೇವೆ' ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ 'AHARA' ತಂತ್ರಾಂಶದ ಮೂಲಕ ನವೆಂಬರ್ 10 ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
'ಅನ್ನ ಸೇವೆ' ಆ್ಯಪ್ ಈಗ ದೇಶಾದ್ಯಂತ ಲಭ್ಯ
ಹೊರ ರಾಜ್ಯಗಳಿಗೆ ಕೆಲಸಕ್ಕೆಂದು ಹೋಗಿರುವ ರಾಜ್ಯದ ಪಡಿತರ ಚೀಟಿದಾರಿಗೆ ಅನುಕೂಲ ಕಲ್ಪಿಸಲು, 'ಅನ್ನ ಸೇವೆ' ಆ್ಯಪ್ ನ ಲಭ್ಯತೆಯನ್ನು ಇಂದಿನಿಂದ ದೇಶಾದ್ಯಂತ ವಿಸ್ತರಿಸಲಾಗಿದೆ. ಹೊರರಾಜ್ಯಗಳಲ್ಲಿರುವ ರಾಜ್ಯದ ಪಡಿತರ ಚೀಟಿದಾರರು ಅವರಿದ್ದಲಿಂದಲೇ ಆ್ಯಪ್ ಡೌನಲೋಡ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿಕೊಂಡಿದೆ.
ಅನ್ನ ಸೇವೆ ಆ್ಯಪ್ ನ ಅಪ್ಡೇಟ್ ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ಈಗಾಗಲೇ ತಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನಲೋಡ್ ಮಾಡಿಕೊಂಡಿರುವವರು ಅಪ್ಡೇಟ್ ಮಾಡಿಕೊಳ್ಳಬಹುದು.






