5 ರಿಂದ 17 ವರ್ಷದೊಳಗಿನವರಿಗೆ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ಗೆ ಸೆ.30ರ ವರೆಗೆ ಕಾಲಾವಕಾಶ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯದಲ್ಲಿನ 5 ರಿಂದ 17 ವರ್ಷದೊಳಗಿನವರಿಗೆ ಸೆಪ್ಟೆಂಬರ್ 30ರ ವರೆಗೆ ಆಧಾರ್ ಸಂಖ್ಯೆಯ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲು ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಗುರುವಾರ ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ರಾಜ್ಯದ ಎಲ್ಲ ಆಧಾರ್ ಸೇವಾ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿತ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದೆ.
ಎಲ್ಲ ಪೋಷಕರು ಜವಾಬ್ದಾರಿಯಿಂದ ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಈ ವಿಷಯದ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಅಪ್ಡೇಟ್ ಏತಕ್ಕೆ?: ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸುವುದರಿಂದ ಹಲವು ಸರಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು, ಸರಕಾರದ ಯೋಜನೆಗಳ ಲಾಭ ಪಡೆಯುವುದು ಹಾಗೂ ವಿದ್ಯಾರ್ಥಿ ವೇತನ-ತರಬೇತಿ ಸೌಲಭ್ಯಗಳನ್ನು ಪಡೆಯುವುದು ಒಳಗೊಂಡಿದೆ.






