ಆ.14ರಂದು ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ: ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ (File Photo)
ಬೆಂಗಳೂರು: ನನ್ನ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲು ಸರಕಾರ ಮುಂದಾಗಿರುವ ಹಿನ್ನೆಲೆ ಆ.14ರಂದು ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದಾದರೆ ಮಾಡಿ. ಪೀಠದ ಗೌರವ ಉಳಿಸಲು ನಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸರಕಾರಕ್ಕೆ ತಿಳಿಸಿದ್ದೇನೆ. ಗೌರವಯುತವಾಗಿ ನಾನು ಹುದ್ದೆ ಬಿಡುವ ಸಲುವಾಗಿ ಆ.14ರಂದು ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ಸದನದದಲ್ಲಿ ಚರ್ಚೆಯಾಗಿ ಅವಿಶ್ವಾಸ ನಿರ್ಣಯ ಬಹುಮತದೊಂದಿಗೆ ನನ್ನ ಸೋಲಿಸಿದರೆ, ನನ್ನ ಗೌರವ ಏನಾಗುತ್ತದೆ. ಹೀಗಾಗಿ ನಾನಾಗಿಯೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಂದಲ್ಲ ನಾಳೆಯಾದರೂ ಈ ಹುದ್ದೆ ಬಿಡಲೇ ಬೇಕು ಎಂದು ತಿಳಿಸಿದರು.
ನಾನು 18 ಜನ ಸಿಎಂಗಳನ್ನು ನೋಡಿದ್ದೇನೆ. ಇದು ಮೊಟ್ಟ ಮೊದಲ ಬಾರಿಗೆ ಈ ರೀತಿ ಆಗಿದೆ. ಇದರಿಂದ ನನಗೆ ಬೇಸರವಾಗಿದೆ. ನಾನು ಹೀಗೆ ರಾಜೀನಾಮೆ ನೀಡುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಸದನದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಿದ್ದೇನೆ. ಎಲ್ಲರೂ ನನ್ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗಿದ್ದಾಗ ನನ್ನ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವುದು ನನಗೆ ನೋವು ತಂದಿದೆ ಎಂದು ಬೇಸರ ಹೊರಹಾಕಿದರು.




