ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ನ್ಯಾಯಾಲಯದ ಆದೇಶಗಳಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆಗಿರಲಿಲ್ಲ. ಮುಂದಿನ ನಾಲ್ಕೈದು ತಿಂಗಳಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಗಳವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಮನರೇಗಾ ಬಚಾವ್ ಸಂಗ್ರಾಮ’ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿನ್ನೆ ಸುಪ್ರೀಂ ಕೋರ್ಟ್ ಕೂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿರುವ ಪಾಲಿಕೆಗಳ ಚುನಾವಣೆ ನಡೆಸುವ ಸಂಬಂಧ ಆದೇಶ ನೀಡಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ನಮ್ಮ ಸರಕಾರ ಬದ್ಧವಾಗಿದೆ. ಮೀಸಲಾತಿ ವಿಚಾರ ಹಾಗೂ ಇತರೆ ತೊಡಕು ನಿವಾರಿಸಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದು ಶಿವಕುಮಾರ್ ಕರೆ ನೀಡಿದರು.
ನಮ್ಮ ಭವಿಷ್ಯ ತೀರ್ಮಾನಿಸುವ ಎಸ್ಐಆರ್ ಬಗ್ಗೆ ಎಚ್ಚರವಾಗಿರಿ: ನಮ್ಮ ರಾಜ್ಯಕ್ಕೆ ಎಸ್ಐಆರ್ ಬರುತ್ತಿದೆ. ಅಧಿಕಾರಿಗಳು ಈಗಾಗಲೆ ಕೆಲಸ ಮಾಡುತ್ತಿದ್ದಾರೆ. ಬೂತ್ ಮಟ್ಟದ ಏಜೆಂಟ್(ಬಿಎಲ್ಎ) ವಿಚಾರದಲ್ಲಿ ಯಾವುದೆ ಮುಲಾಜಿರುವುದಿಲ್ಲ. ನಮ್ಮ ಭವಿಷ್ಯ ತೀರ್ಮಾನವಾಗುವುದೆ ಎಸ್ಐಆರ್ ನಲ್ಲಿ. ಮತದಾರರ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಬಿಎಲ್ಎಗಳು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಶಿವಕುಮಾರ್ ತಿಳಿಸಿದರು.
ನೀವು ಹಕ್ಕನ್ನು ಕಾಪಾಡಿಕೊಳ್ಳಬೇಕು. ನಮ್ಮ ರಾಜ್ಯದಿಂದ ವೋಟ್ ಚೋರಿ ಅಭಿಯಾನ ಆರಂಭವಾಗಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇನ್ನು ವೋಟ್ ಚೋರಿ(ಮತಗಳ್ಳತನ) ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ 1.41 ಕೋಟಿ ಸಹಿ ಸಂಗ್ರಹಿಸಿದ ಎಲ್ಲ ಜಿಲ್ಲಾಧ್ಯಕ್ಷರು, ಶಾಸಕರು, ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷ ಉಳಿದರೆ ನಾವು ನೀವುಗಳು, ಪಕ್ಷವಿಲ್ಲವೆಂದರೆ ನಾವುಗಳು ಇರುವುದಿಲ್ಲ ಎಂದು ಶಿವಕುಮಾರ್ ಎಚ್ಚರಿಸಿದರು.
ನಮ್ಮ ಸರಕಾರ ಆರನೆ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ, ಏಳನೆ ಗ್ಯಾರಂಟಿಯಾಗಿ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಗೃಹಲಕ್ಷ್ಮಿ ಹಣ ಒಂದೆರಡು ತಿಂಗಳು ತಡವಾಗಿರಬಹುದು. ಹಣ ಸಂಗ್ರಹವಾದ ಬಳಿಕ ಎಲ್ಲವನ್ನು ಜಮೆ ಮಾಡಲಾಗುವುದು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಫೆ.13ರಂದು ದೊಡ್ಡ ಕಾರ್ಯಕ್ರಮ ಮಾಡಲು ಚರ್ಚೆ ಮಾಡುತ್ತಿದ್ದು, ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಪ್ರತಿ ತಾಲೂಕು, ಪಂಚಾಯಿತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಕರೆಕೊಟ್ಟರು.
ನಾವು ರಾಜ್ಯಕ್ಕೆ ನೀಡಿರುವ ಗ್ಯಾರಂಟಿ ಯೋಜನೆಗಳು, ಮಾಡಿರುವ ಕೆಲಸ ಜನರನ್ನು ತಲುಪಿದೆ. ನಾವು ಗ್ಯಾರಂಟಿ ಸಮಿತಿ, ಸ್ಥಳೀಯ ಮಟ್ಟದಲ್ಲಿ ನಾಮನಿರ್ದೇಶನ ಸೇರಿದಂತೆ ಕಾರ್ಯಕರ್ತರಿಗೆ ಈಗಾಗಲೇ ಅಧಿಕಾರ ನೀಡಿದ್ದೇವೆ. 600 ಜನ ರಾಜ್ಯ ಮಟ್ಟದ ನಾಮನಿರ್ದೇಶನ ಹೊರತುಪಡಿಸಿ ಉಳಿದ ಎಲ್ಲ ಅಧಿಕಾರಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಪಟ್ಟಿಯೂ ಅಂತಿಮವಾಗಿದ್ದು, ಸಣ್ಣಪುಟ್ಟ ತಾಂತ್ರಿಕ ಬದಲಾವಣೆ ಮಾತ್ರ ಬಾಕಿ ಇದೆ. ಇದುವರೆಗೂ ನಾವು 20 ಡಿಸಿಸಿ ಅಧ್ಯಕ್ಷರು, 25 ಪದಾಧಿಕಾರಿಗಳಿಗೆ, 47 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಟಿಕೆಟ್ ವಂಚಿತ ಕಾರ್ಯಕರ್ತರ ಪೈಕಿ 19 ಜನರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.







