ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ | ಹಾಲು ಒಕ್ಕೂಟದ ಎಲ್ಲ ಅಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದೇವೆ: ಡಿ.ಕೆ. ಸುರೇಶ್

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ಬೆಂಗಳೂರು: ಹಾಲು ಉತ್ಪಾದನೆ ಹಾಗೂ ನಿರ್ವಹಣಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಠ 10 ರೂ.ಗಳಷ್ಟು ಏರಿಕೆ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲು ನಾಳೆ (ಸೆ.26) ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್)ಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೀಟರ್ ಹಾಲಿಗೆ ಕನಿಷ್ಠ 10 ರೂ.ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ, ಇತ್ತೀಚಿಗೆ ರೈತರು ಹೋರಾಟ ಮಾಡಿದ್ದರು. ಆ ವಿಚಾರವಾಗಿ ಚರ್ಚಿಸಲು ಹಾಲು ಒಕ್ಕೂಟದ ಎಲ್ಲ ಅಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಹಾಲು ಒಕ್ಕೂಟದಲ್ಲಿರುವ ಸಮಸ್ಯೆಗಳು, ಆಡಳಿತಾತ್ಮಕ ವೆಚ್ಚ, ಉತ್ಪಾದನಾ ವೆಚ್ಚ, ಸಾಗಣೆ ವೆಚ್ಚದ ಕುರಿತು ಸರಕಾರದ ಗಮನವನ್ನು ಸೆಳೆಯಬೇಕು. ನಮ್ಮ(ಕೆಎಂಎಫ್) ಹಾಲಿನ ದರಕ್ಕೂ ಬೇರೆ ಕಂಪೆನಿಯ ಹಾಲಿನ ದರಕ್ಕೂ 10ರೂ.ವ್ಯತ್ಯಾಸವಿದೆ. ಬೇರೆ ರಾಜ್ಯದ ಹಾಲು ಉತ್ಪಾದಕರಿಗೆ ಸಿಗುತ್ತಿರುವ ದರಕ್ಕೂ, ನಮ್ಮ ರಾಜ್ಯದಲ್ಲಿನ ಹಾಲು ಉತ್ಪಾದಕರಿಗೆ ಸಿಗುತ್ತಿರುವ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದನ್ನು ಸರಿಪಡಿಸಬೇಕು ಎಂದು ಅವರು ಕೋರಿದರು.
ನಮಗೆ ರೈತರು ಮತ ಹಾಕಿ ಅಧ್ಯಕ್ಷರನ್ನು ಮಾಡಿದ್ದಾರೆ. ಅದಕ್ಕಾಗಿ ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ. ಅದರ ಜೊತೆಗೆ ಗ್ರಾಹಕರು ಬಹಳ ಮುಖ್ಯ. ಗ್ರಾಹಕರಿಗೆ ಗುಣಮಟ್ಟದ ಹಾಲು ನೀಡುವ ಜವಾಬ್ದಾರಿ ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಮೇಲಿದೆ. ಗ್ರಾಹಕರಿಗೆ ಯಾವುದೇ ರೀತಿಯ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೇ ಕೆಎಂಎಫ್ ಉತ್ಪನ್ನಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸುರೇಶ್ ಹೇಳಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಾಜ್ಯದ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ, ಹಾಲು ಉತ್ಪಾದಕರ ಹಿತಾಸಕ್ತಿ ಹಾಗೂ ನಂದಿನಿ ಬ್ರ್ಯಾಂಡ್ನ ಮತ್ತಷ್ಟು ಬಲವರ್ಧನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬಳ್ಳಾರಿ ಹಾಲು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ವೈ ನಂಜೇಗೌಡ, ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಎಂ.ಕೆ ಹರೀಶ್ ಬಾಬು, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.






