ಜ.3ರಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಭದ್ರಾ ನೀರು ಹರಿಸಲು ನಿರ್ಣಯ: ಎಸ್.ಮಧು ಬಂಗಾರಪ್ಪ

ಶಿವಮೊಗ್ಗ(ಜ.೦2): ಭದ್ರಾ ಜಲಾಶಯದಲ್ಲಿನ ನೀರನ್ನು ಜ.3ರಿಂದ ಎಡದಂಡೆ ನಾಲೆಗೆ ಹಾಗೂ ಜ.8ರಿಂದ ಬಲದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಶುಕ್ರವಾರ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಮುಂದಿನ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗದಂತೆ ಅವಶ್ಯಕವಾಗಿರುವ ನೀರನ್ನು ಒದಗಿಸಲು ಮತ್ತು ನಗರ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವುದನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಚ್ಚುಕಟ್ಟು ವ್ಯಾಪ್ತಿಯ ನಾಲೆ, ಕೆರೆಗಳಲ್ಲಿ ತುಂಬಿರುವ ಹೂಳನ್ನು ನರೇಗಾ ಯೋಜನೆಯಡಿ ತೆಗೆಯಿಸಬಹುದಾದರೂ ಪಟ್ಟಣ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿನ ನಾಲೆ, ಕೆರೆಗಳಲ್ಲಿನ ಹೂಳನ್ನು ತೆಗೆಯಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷೆಯಂತೆ ಸಕಾಲದಲ್ಲಿ ಜಲಾಶಯದಿಂದ ಹರಿಸುವ ನೀರು ನಿಗದಿತ ಗುರಿ ತಲುಪುತ್ತಿಲ್ಲ. ಆದ್ದರಿಂದ ಪ್ರಾಧಿಕಾರದ ನೀರಾವರಿ ಇಂಜಿನಿಯರ್‌ರವರು ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಪ್ರಸ್ತಾವನೆಯನ್ನು ತಯಾರಿಸಿ ಕೂಡಲೇ ಸಲ್ಲಿಸಬೇಕು. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಸಮೀಪದ ಸಾಗುವಳಿದಾರರಿಗೆ ನೀರು ದೊರೆಯುತ್ತಿರುವಂತೆಯೇ ದೂರದ ರೈತರ ಒಣಭೂಮಿಗೆ ನೀರು ಹರಿಸಬೇಕಾಗಿರುವುದು ಪ್ರಾಧಿಕಾರದ ಹೊಣೆಯಾಗಿದೆ. ನೈಸರ್ಗಿಕವಾಗಿ ದೊರೆಯುತ್ತಿರುವ ಅಮೂಲ್ಯ ಜಲವನ್ನು ಮಿತವಾಗಿ ಬಳಸಿಕೊಳ್ಳಬೇಕು. ಮಾನವೀಯ ನೆಲೆಯಲ್ಲಿ ಎಲ್ಲ ರೈತರ ಹಿತಸುಖ ಕಾಯುವ ನಿಟ್ಟಿನಲ್ಲಿ ಚಿಂತಿಸಬೇಕು. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ವ್ಯರ್ಥವಾಗಿ ಹರಿದು ಹೋಗುವಂತಾಗಬಾರದು. ನೀರಿನ ಮಿತಬಳಕೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಇರಬೇಕು. ಪ್ರಾಧಿಕಾರದ ನಿರ್ಣಯಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನಾಲೆಗಳ ದುರಸ್ತಿಗೆ ಈಗಾಗಲೇ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದೆ. ಇನ್ನಷ್ಟು ಅನುದಾನದ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿದಲ್ಲಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಆರ್.ಪ್ರಸನ್ನಕುಮಾರ್, ಅಭಿಯಂತರರಾದ ರವಿಕುಮಾರ್, ರವಿಚಂದ್ರ ಸೇರಿದಂತೆ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ನೀರಾವರಿ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು.







