'ವಕ್ಫ್ ಆಸ್ತಿ ಕಬಳಿಕೆ' ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಪತ್ರಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ: ಅನ್ವರ್ ಬಾಷಾ

ಕೆ.ಅನ್ವರ್ ಬಾಷಾ- ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರು
ಕಲಬುರಗಿ, ನ. 6: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ’ ಎಂದು ನಾನು ಹೇಳಿಕೆ ನೀಡಿರುವುದಾಗಿ ಸುಳ್ಳು ಸುದ್ದಿ ಪ್ರಕಟಿಸಿರುವ ಉದಯವಾಣಿ, ಬೆಂಕಿಬೆಳಕು, ಸಂಜೆವಾಣಿ ಹಾಗೂ ಇತರೆ ಪತ್ರಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳುವುದಾಗಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಬಾಷಾ ತಿಳಿಸಿದ್ದಾರೆ.
ಸೋಮವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರವಿವಾರ(ನ.5) ರಾಯಚೂರು ಜಿಲ್ಲೆಯಲ್ಲಿರುವ ದರ್ಗಾ ಶೇಖ್ ಅಲಿ ಆವರಣದಲ್ಲಿ ನಾನು ಪತ್ರಿಕಾಗೋಷ್ಠಿ ನಡೆಸಿದ್ದೇನೆ. ಆದರೆ, ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ಕಾಂಗ್ರೆಸ್ ಪಕ್ಷದ ನಾಯಕರು ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಿರುವುದಾಗಿ ಕೆಲವು ಪತ್ರಿಕೆಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿದೆ ಎಂದರು.
ಉದಯವಾಣಿ, ಬೆಂಕಿಬೆಳಕು, ಸಂಜೆವಾಣಿ ಹಾಗೂ ಇತರೆ ಪತ್ರಿಕೆಗಳಲ್ಲಿ ದಾರಿ ತಪ್ಪಿಸುವ, ಮಾನಹಾನಿಕರ ಹಾಗೂ ಸುಳ್ಳು ಸುದ್ದಿ ಪ್ರಕಟಿಸಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಾನು ನಡೆಸಿದ ಪತ್ರಿಕಾಗೋಷ್ಠಿಯ ವಿಡಿಯೋ ಎಲ್ಲರ ಬಳಿ ಲಭ್ಯವಿದ್ದು, ಎಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅಥವಾ ಬೇರೆ ಕಾಂಗ್ರೆಸ್ ನಾಯಕರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ ಎಂದು ಅನ್ವರ್ ಬಾಷಾ ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ಹೆಸರನ್ನು ನಾನು ಪ್ರಸ್ತಾಪಿಸಿರುವುದು ಈ ಪತ್ರಿಕೆಗಳು ಸಾಬೀತುಪಡಿಸಿದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಒಂದು ವೇಳೆ ಸಾಬೀತುಪಡಿಸುವಲ್ಲಿ ವಿಫಲವಾದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅನ್ವರ್ ಬಾಷಾ ತಿಳಿಸಿದರು.
ರಾಯಚೂರಿನಲ್ಲಿ ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಬಿಜೆಪಿ ಮಾಜಿ ಶಾಸಕರೊಬ್ಬರು ನಮ್ಮ ದರ್ಗಾ ಆಸ್ತಿಯನ್ನು ಕಬಳಿಕೆ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಅದನ್ನು ಮರೆ ಮಾಚಲು ಆ ಮಾಜಿ ಶಾಸಕರ ಪರವಾಗಿರುವ ಕೆಲವು ಪತ್ರಕರ್ತರು ಈ ರೀತಿಯ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಾರೆ ಎಂದು ಅವರು ಹೇಳಿದರು.







