ಮತದಾರರ ಹೆಸರು ಕಿತ್ತುಹಾಕುವುದು ಅಮಾನವೀಯ ಕೃತ್ಯ: ಸಿಎಂ ಡಿ.ಕೆ.ಶಿವಕುಮಾರ್
"ಪ್ರಜಾಪ್ರಭುತ್ವದ ಮೇಲೆ ಕೇಂದ್ರ ಸರಕಾರದ ದಾಳಿ"

ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.11: "ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನೆಪದಲ್ಲಿ (ಎಸ್ ಐಆರ್) ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತದಾನದ ಹಕ್ಕನ್ನು ಕಸಿಯುತ್ತಿರುವುದು ಅಮಾನವೀಯ ಕೃತ್ಯ. ಇದು ಪ್ರಜಾಪ್ರಭುತ್ವವಲ್ಲ. ಸರ್ವಾಧಿಕಾರಿ ಧೋರಣೆ. ಇದರ ವಿರುದ್ಧ ನಾವು ಹೋರಾಟ ಮಾಡಿಯೇ ತೀರುತ್ತೇವೆ" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರದ ನಿವಾಸದ ಬಳಿ ರವಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು,
"ಕರ್ನಾಟಕದಲ್ಲಿ ಕೋಟ್ಯಂತರ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ನಾನು ಒಬ್ಬ ಮುಖ್ಯಮಂತ್ರಿಯಾಗಿ ಈ ರಾಜ್ಯದ ಜನರ ಮತದಾನದ ಹಕ್ಕನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಅದನ್ನು ಮಾಡುತ್ತೇನೆ" ಎಂದರು.
*ಪ್ರಜಾಪ್ರಭುತ್ವದ ಮೇಲೆ ಕೇಂದ್ರ ಸರಕಾರದ ದಾಳಿ
"ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ತುರ್ತು ಪರಿಸ್ಥಿತಿಯಿದೆಯೇ ಎಂಬುದಕ್ಕೆ ಪ್ರಧಾನಮಂತ್ರಿ ರಾಷ್ಟ್ರದ ಜನತೆಗೆ ಉತ್ತರಿಸಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಅವಕಾಶವಿದೆ. ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸರಕಾರದ ವಿರುದ್ಧ ದನಿ ಎತ್ತುವವರನ್ನು ಏಕಾಏಕಿ ವಿಮಾನದಲ್ಲೇ ಬಂಧಿಸುವುದು ಮತ್ತು ಪ್ರತಿನಿಧಿಗಳನ್ನು ವಶಕ್ಕೆ ಪಡೆಯುವುದು ಇಡೀ ದೇಶಕ್ಕೇ ಮಾಡುತ್ತಿರುವ ದೊಡ್ಡ ಅವಮಾನ. ವಿಶ್ವದಲ್ಲಿ ಭಾರತ ಎಂದರೆ ಪ್ರಜಾಪ್ರಭುತ್ವ ಎಂದು ಹೆಸರಾಗಿದೆ. ಈ ಹೆಸರಿಗೆ ಕೇಂದ್ರ ಸರಕಾರ ಕಳಂಕ ತರುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
"ಕೇಂದ್ರ ಸರಕಾರ ದೇಶದ ಜನರ ದನಿಗೆ ಮನ್ನಣೆ ಕೊಡಬೇಕು. ಅವರ ಅಭಿಪ್ರಾಯ ಆಲಿಸಬೇಕು. ಚುನಾವಣಾ ಆಯೋಗವನ್ನು ಭೇಟಿ ಮಾಡಲು ಅವಕಾಶ ಕೊಡಬೇಕು. ಸರಕಾರದ ಕಾರ್ಯವೈಖರಿಯ ಬಗ್ಗೆ ಟೀಕೆಗಳನ್ನು ಕೇಳಬೇಕು. ಅದನ್ನು ಬಿಟ್ಟು ಟೀಕಿಸುವವರನ್ನು ಬಂಧಿಸುವುದು ಸರಿಯಲ್ಲ" ಎಂದರು.
ಎಸ್ ಐಆರ್ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಇತರೇ ಹೋರಾಟಗಾರರ ಜೊತೆ ಕೈ ಜೋಡಿಸಿದೆಯೇ ಎನ್ನುವ ಪ್ರಶ್ನೆಗೆ, "ನಾವು ಯಾರ ಜೊತೆ ಸೇರಿ ಪ್ರತಿಭಟನೆ ಮಾಡುತ್ತಿಲ್ಲ. ಆದರೆ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷ ತನ್ನದೇ ಆದ ಹಾದಿಯಲ್ಲಿ ಮತದಾರರ ಹಕ್ಕನ್ನು ಉಳಿಸಲು ಪ್ರಯತ್ನ ಪಡುತ್ತಿದೆ. ನಾಳೆ ನಮ್ಮ ‘ಇಂಡಿಯಾ ಒಕ್ಕೂಟ’ಪ್ರತಿಭಟನೆ ಮಾಡಲಿದೆ. ನಾನೂ ಕೂಡ ಅದರಲ್ಲಿ ಭಾಗವಹಿಸುತ್ತಿದ್ದೇನೆ. ದೇಶದ ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕನ್ನು ಉಳಿಸುವುದು ನಮ್ಮ ಜವಾಬ್ದಾರಿ" ಎಂದು ಉತ್ತರಿಸಿದರು.






