ಪರಿಶಿಷ್ಟ ಜಾತಿ ಕಾರಣಕ್ಕೆ ನಾಗ್ಪುರದ ಆರೆಸ್ಸೆಸ್ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಣೆ: ಗೂಳಿಹಟ್ಟಿ ಶೇಖರ್ ಆರೋಪ
ಬಿ.ಎಲ್.ಸಂತೋಷ್ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ ಮಾಜಿ ಬಿಜೆಪಿ ಶಾಸಕ

ಮಾಜಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್
ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬುದು ತಿಳಿದು ಮಹಾರಾಷ್ಟ್ರದಲ್ಲಿನ ನಾಗ್ಪುರದ ಆರೆಸ್ಸೆಸ್ ಹೆಡಗೇವಾರ್ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಿದ್ದಾರೆ ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆರೋಪಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, “ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ಚುನಾವಣೆ ಘೋಷಣೆಯಾಗುವುದಕ್ಕೂ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರದ ಆರೆಸ್ಸೆಸ್ ಕಚೇರಿಗೆ ಖುಷಿಯಿಂದ ಭೇಟಿ ನೀಡಿದ್ದೆ. ಆದರೆ, ಹೆಡಗೇವಾರ್ ವಸ್ತುಸಂಗ್ರಹಾಲಯ ಪ್ರವೇಶಕ್ಕೆ ನಿರಾಕರಿಸಲಾಯಿತು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಮ್ಯೂಸಿಯಂ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ನನ್ನೊಂದಿಗೆ ಇದ್ದ ಇಬ್ಬರು ಮಾತ್ರ ಒಳಗೆ ಹೋದರು. ನಾನು ಹೊರಗೆ ಕಾಯುತ್ತಾ ಕುಳಿತುಕೊಳ್ಳಬೇಕಾಯಿತು. ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬಲ್ಲಿರಾ?” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ.







