ದೇವೇಗೌಡರಿಗೆ ರಾಜ್ಯಸಭೆ ಸ್ಥಾನ ನಿರಾಕರಿಸಿರುವುದು ಜೆಡಿಎಸ್ಗೆ ಮಾಡಿರುವ ಅವಮಾನ: BJP ವಿರುದ್ಧ ಸುರ್ಜೇವಾಲಾ ವಾಗ್ದಾಳಿ

ಎಚ್.ಡಿ. ದೇವೇಗೌಡ / ರಣದೀಪ್ ಸಿಂಗ್ ಸುರ್ಜೇವಾಲಾ (Photo source: PTI)
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನೀಡದ ಬಿಜೆಪಿ ನಿರ್ಧಾರವನ್ನು ಟೀಕಿಸಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಇದು ಜೆಡಿಎಸ್ ಮತ್ತು ಅದರ ನಾಯಕತ್ವಕ್ಕೆ ಆಗಿರುವ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ರಾಜ್ಯಸಭೆಗೆ ದೇವೇಗೌಡರ ಬದಲಿಗೆ ಎಂ. ನಾಗರಾಜ ಅವರನ್ನು ಆಯ್ಕೆ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ.
‘ಬಿಜೆಪಿ ನಾಯಕತ್ವದಿಂದ ಜೆಡಿಎಸ್ಗೆ ನಿರಂತರವಾಗಿ ಆಗುತ್ತಿರುವ ಅವಮಾನಗಳನ್ನು ಎಚ್.ಡಿ. ಕುಮಾರಸ್ವಾಮಿ ಸಹಿಸಿಕೊಳ್ಳುತ್ತಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಅಧಿಕಾರದಲ್ಲಿ ಉಳಿಯುವ ಉದ್ದೇಶದಿಂದ ಕೇಂದ್ರ ಸಚಿವ ಸ್ಥಾನಕ್ಕೆ ಅಂಟಿಕೊಂಡಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ’ ಎಂದು ಅವರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ದೇವೇಗೌಡರನ್ನು ಸೋಲಿಸಿದ್ದರು. ನಂತರ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಮಾಜಿ ಪ್ರಧಾನಿ ಎಂಬ ಗೌರವದ ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಅವರು ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಬೆಂಬಲ ನೀಡಿದ್ದರು ಎಂದು ಸುರ್ಜೇವಾಲಾ ಹೇಳಿದ್ದಾರೆ.
ದೇವೇಗೌಡರು ಈ ಹಿಂದೆ ಬಿಜೆಪಿಯ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಜತೆ ಕೈಜೋಡಿಸಿದರೆ ‘ಕುಮಾರಸ್ವಾಮಿಯನ್ನೇ ಬಿಟ್ಟುಕೊಡುತ್ತೇನೆ’ ಎಂದು ಅವರು ಸಾರ್ವಜನಿಕವಾಗಿ ಹೇಳಿದ್ದರು ಎಂದೂ ಉಲ್ಲೇಖಿಸಿದ್ದಾರೆ.
ಆದರೆ, 2023ರ ಅಕ್ಟೋಬರ್ ನಲ್ಲಿ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತು. ಬಳಿಕ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಭಾರೀ ಕೈಗಾರಿಕೆಗಳ ಸಚಿವರಾದರು ಎಂದು ಅವರು ಹೇಳಿದ್ದಾರೆ.
‘ಈಗ ಜೂನ್ 7ರಂದು ಬಿಜೆಪಿ, ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭೆಯ ಟಿಕೆಟ್ ನೀಡದೆ ಎಂ. ನಾಗರಾಜ ಅವರಿಗೆ ಆದ್ಯತೆ ನೀಡಿದೆ. ಈ ಘಟನೆಯು ಅಧಿಕಾರಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳುವುದು ಮತ್ತು ಯಾವುದೇ ಬೆಲೆ ತೆರುವುದು ಜೆಡಿಎಸ್ನ ರಾಜಕೀಯ ಧೋರಣೆಯಾಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.






