‘ದೇವನಹಳ್ಳಿ ಚಲೋ’ | ಪ್ರಾಣ ಬೇಕಾದರೂ ಬಿಡುತ್ತೇವೆ, ಮಣ್ಣನ್ನು ಮಾರಾಟ ಮಾಡುವುದಿಲ್ಲ : 13 ಗ್ರಾಮಗಳ ರೈತರ ಪ್ರತಿಜ್ಞೆ
► ‘ರೈತರೊಂದಿಗೆ ಇಲ್ಲೇ ಮಲಗುತ್ತೇನೆ, ಬೇಕಾದರೆ ನನ್ನ ಜೈಲಿಗೆ ಹಾಕಿ : ಪ್ರಕಾಶ್ ರಾಜ್ ► ರೈತ ಮುಖಂಡರು ಹಾಗೂ ಹೋರಾಟಗಾರರನ್ನು ಬಂಧಿಸಿದ ಪೊಲೀಸರು

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಗೆ ಸೇರಿದ 13 ಗ್ರಾಮಗಳ 1,777 ಎಕರೆ ಭೂಮಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಬುಧವಾರ ನಡೆಸಿದ ದೇವನಹಳ್ಳಿ ಚಲೋದಲ್ಲಿ ರೈತರು ‘ಪ್ರಾಣ ಬೇಕಾದರೂ ಬಿಡುತ್ತೇವೆ, ಆದರೆ ನಮ್ಮ ಮಣ್ಣನ್ನು ಮಾತ್ರ ಮಾರಿಕೊಳ್ಳುವುದಿಲ್ಲ’ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ದೇವನಹಳ್ಳಿ ರೈತರ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಹಾಗೂ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ‘ಯಾವುದೇ ಕಾರಣಕ್ಕೂ ನಾವು ಜಾಮೀನು ಪಡೆಯುವುದಿಲ್ಲ’ ಎಂದು ರೈತರು, ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸತತ 1,180 ದಿನಗಳಿಂದ 13 ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಮತ್ತು ಸರಕಾರದ ಅಂತಿಮ ಆದೇಶವನ್ನು ವಿರೋಧಿಸಿ ‘ಸಂಯುಕ್ತ ಹೋರಾಟ-ಕರ್ನಾಟಕ’ದ ನೇತೃತ್ವದಲ್ಲಿ 15 ಸಂಘಟನೆಗಳ ಬೆಂಬಲದೊಂದಿಗೆ ದೇವನಹಳ್ಳಿ ಹಳೆ ಬಸ್ ನಿಲ್ದಾಣದ ಬಳಿ ನಡೆದ ‘ದೇವನಹಳ್ಳಿ ಚಲೋ’ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್, ‘ನಾನು ರೈತರೊಂದಿಗೆ ಇರುತ್ತೇನೆ. ಅವರ ಹೋರಾಟದ ಸ್ಥಳದಲ್ಲಿ ಮಲಗುತ್ತೇನೆ. ಜೈಲಿಗೆ ಹಾಕುವುದಾದರೆ ನನ್ನನ್ನೂ ಹಾಕಿ, ನಾನು ಜಾಮೀನು ಪಡೆಯುವುದಿಲ್ಲ’ ಎಂದು ಸರಕಾರಕ್ಕೆ ಸವಾಲು ಹಾಕಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಯವಿಟ್ಟು ಕೇಳಿ. ಇನ್ನೊಂದು ಹೋರಾಟ ನಡೆದು ನಿಮ್ಮನ್ನು ಇಳಿಸುವುದಕ್ಕೆ ಕಾರಣ ಆಗುವುದು ಬೇಡ. ಮನಸ್ಸಾಕ್ಷಿಯಿಂದ ಜನರ ವೇದನೆಯನ್ನು ಅರ್ಥ ಮಾಡಿಕೊಳ್ಳಿ, ರೈತರನ್ನು ಅರ್ಥ ಮಾಡಿಕೊಳ್ಳಿ. ನಾವು ಭೂಮಿಯನ್ನು ಮಾರುವುದಿಲ್ಲ ಎಂದರೆ ಮಾರುವುದಿಲ್ಲ. ಯಾವ ರಾಜಕಾರಣ ನಡೆಯುತ್ತಿದೆ ಇಲ್ಲಿ?, ಪೊಲೀಸರನ್ನು ಉಪಯೋಗಿಸುತ್ತೀರಾ? ಯಾವ ಸರ್ವಾಧಿಕಾರ ನಡೆಯುತ್ತಿದೆ?’ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
‘ಸಿದ್ದರಾಮಯ್ಯನವರೇ, ನಿಮ್ಮ ಮೇಲೆ ತುಂಬಾ ಗೌರವ ಇದೆ. ಜನರಿಗೆ ದಯವಿಟ್ಟು ಸ್ಪಂದಿಸಿ. ಕಿವಿ, ಮನಸ್ಸಾಕ್ಷಿಯನ್ನು ಇಟ್ಟುಕೊಂಡು ಸ್ಪಂದಿಸಿ. ನಮಗೆ ನಮ್ಮ ಭೂಮಿ, ನಮ್ಮ ಹಕ್ಕು, ನಮ್ಮ ಬದುಕು ಬೇಕು. ಒಡೆದು ಆಳುವುದನ್ನು ಬ್ರಿಟಿಷರ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ನಾವು ಒಡೆದು ಹೋಗುವುದಿಲ್ಲ’ ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯನವರೇ, ತಾವು ಅಹಿಂದ, ಜನಪರ, ರೈತರ ಪರ ಅಂತೀರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ, ಇದೇ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಿರಿ. ಮಾತು ಕೊಟ್ಟಿದ್ದೀರಿ ತಾನೇ? ಮಾತಿಗೆ ನಿಲ್ಲುತ್ತೀರಾ? ಮಾತು ತಪ್ಪುತ್ತೀರಾ?, 13 ಹಳ್ಳಿಯ ಹೆಣ್ಣು ಮಕ್ಕಳು ಅಲ್ಲಿನ ಮಣ್ಣನ್ನು ತಂದು ಗಿಡಕ್ಕೆ ಹಾಕಿ, ನಾವು ಮಣ್ಣನ್ನು ಮಾರುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿಮಗೆ ಧಿಕ್ಕಾರ ಹಾಕುವ ಸಮಯ ತುಂಬಾ ದೂರವಿಲ್ಲ. ಕರ್ನಾಟಕದ ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿಗೆ ಬರಬೇಕಾ ನೀವು? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕಾಂಕ್ರೀಟ್ ಕಾಡನ್ನು ಬೆಳೆಸಿಕೊಂಡು ಹೋದರೆ, ಇಲ್ಲಿ ಯಾವ ಜೀವವೂ ಉಳಿಯುವುದಿಲ್ಲ. ರೈತರ ದೇಶದ ಬೆನ್ನೆಲುಬು ಎನ್ನುವುದು ಸುಮ್ಮನೇ ಹೇಳಿಲ್ಲ, ಪ್ರತಿದಿನ ಹೊಟ್ಟೆಗೆ ಹಾಕುವ ಅನ್ನವನ್ನು ನೆನಪಿಸಿಕೊಳ್ಳಿ. ಪ್ರತಿ ಅನ್ನದ ಹಿಂದೆ ರೈತನ ಶ್ರಮವಿದೆ. ಈ ಮಾತು ಹೃದಯಹೀನ ಸರಕಾರಕ್ಕೆ ಕೇಳಬೇಕು ಎಂದರು.
ಡಿ.ದೇವರಾಜ ಅರಸು ಅವರ ಕಾಲದಲ್ಲಿ ರೈತರಿಗೆ ಭೂಮಿಯನ್ನು ನೀಡಿದರೆ, ನೀವು ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದೀರಿ. ರೈತರು ಒಂದಾಗಿ ಬಾಳಬೇಕು. ಅದಕ್ಕಾಗಿ ರೈತರಿಂದ ಕಿತ್ತುಕೊಂಡ ಭೂಮಿಯನ್ನು ವಾಪಾಸು ನೀಡಬೇಕು. ನಿಮಗೆ ಭೂಮಿ ಬೇಕೆಂದರೆ ಬಂಜರು ಭೂಮಿಯ ತೆಗೆದುಕೊಳ್ಳಿ, ಅದಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಬೇಡಿ. ರೈತರ ಹೊಟ್ಟೆಯ ಮೇಲೆ ಹೊಡೆಯದಿರಿ ಎಂದು ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಸ್ವಾತಂತ್ರ್ಯದ ನಂತರ ಈ ದೇಶ ವಿರುದ್ಧ ದಿಕ್ಕಿಗೆ ಹೊರಟಿದೆ. ರಾಷ್ಟ್ರೀಕರಣದ ಕನಸ್ಸನ್ನು ಕಂಡದ್ದು, ಆದರೆ ಇಂದು ಖಾಸಗೀಕರಣದ ಪರವಾಗಿ ಹೊರಟಿದೆ. ಸರಕಾರಗಳು ಮತದಾನಗಳ ಮೂಲಕ ಬರುತ್ತಿಲ್ಲ. ಮತಗಳ ಕಬಳಿಸುವ ಮೂಲಕ ಅಧಿಕಾರಕ್ಕೆ ಬರುತ್ತಿದ್ದಾರೆ. ಖಾಸಗಿ ಬಂಡವಾಳಶಾಹಿಗಳ ಕಂಪೆನಿಗಳು ಇಂದು ಸರಕಾರಗಳನ್ನು ರಚನೆ ಮಾಡುತ್ತಿವೆ. ಸರಕಾರಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹರಳೂರು, ಪೋಲನಹಳ್ಳಿ, ಗೋಕೆರೆ, ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಿಬಾರ್ಲು, ಮುದ್ದೇನಹಳ್ಳಿ ಚನ್ನರಾಯಪಟ್ಟಣ, ತೆಲ್ಲೋಹಳ್ಳಿ, ಹ್ಯಾಡಾಳ ಸೇರಿದಂತೆ ಹಲವು ಗ್ರಾಮಗಳ ಮಹಿಳೆಯರು ಸಾಂಕೇತಿಕವಾಗಿ ತಂದ ತಮ್ಮ ಊರಿನ ಮಣ್ಣನ್ನು ಗಿಡಕ್ಕೆ ಸುರಿಯುವ ಮೂಲಕ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದರು.
ಈ ವೇಳೆಯಲ್ಲಿ ಹೋರಾಟಗಾರರಾದ ಎಚ್.ಎಸ್.ಬಸವರಾಜಪ್ಪ, ಪ್ರಕಾಶ್ ಕಮ್ಮರಡಿ, ವರಲಕ್ಷ್ಮಿ, ಚುಕ್ಕಿ ನಂಜುಂಡಸ್ವಾಮಿ, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು, ಮುಖ್ಯಮಂತ್ರಿ ಚಂದ್ರು, ಅನುಸೂಯಮ್ಮ, ಮೀನಾಕ್ಷಿ ಸುಂದರಂ, ಇಂದಿರಾ ಕೃಷ್ಣಪ್ಪ, ಶಿವಪ್ರಸಾದ್, ನಾಗರಾಜ್, ಶಿವಪ್ಪ, ಅಪ್ಪಣ್ಣ, ತಾರಾ ರಾವ್, ಚಂದ್ರಪ್ಪ ಹೊಸಕೆರೆ, ವಸಂತಕುಮಾರ್, ಕೆ.ಎನ್.ಉಮೇಶ್, ಶಿವಾನಂದ, ಮಹೇಶ್ ಪ್ರಭು, ಮಲ್ಲಯ್ಯ, ಲಕ್ಷ್ಮೀನಾರಾಯಣ ರೆಡ್ಡಿ, ನಾಗರತ್ನ, ಪ್ರಭಾ ಬೆಳವಂಗಲ ಸೇರಿದಂತೆ ವಕೀಲರು, ಕಾರ್ಮಿಕರು, ಪ್ರಾಧ್ಯಾಪಕರು, ಸಿನಿಮಾ ನಟರು, ಕಲಾವಿದರು, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಭೂಮಿಗೆ ಅಲ್ಲ, ಮನುಷ್ಯರಿಗೆ ಬೆಲೆ ಕೊಡಿ: ಮೂರು ಹಳ್ಳಿಗಳನ್ನು ಮಾತ್ರ ಬಿಡುತ್ತಿರಾ? 400 ಎಕರೆ ಬಿಡುತ್ತೀರಾ? ನಿಮ್ಮ ಮಾತಿನ ಅರ್ಥ ಏನು? ಭೂಮಿ ಬೆಲೆ ಹೆಚ್ಚಾಗುತ್ತದೆ ಅಂತಲ್ಲವಾ? ಮನುಷ್ಯರಿಗೆ ಬೆಲೆ ಕೊಡಿ. ಭೂಮಿ ಬೆಲೆ ಹೆಚ್ಚಾದರೆ ನಿಮ್ಮ ಬೊಕ್ಕಸ ತುಂಬುತ್ತದೆ. ಸಮಾಜ ಬೆಳೆಯಲ್ಲ. ಭೂಮಿಗೆ ಅಲ್ಲ, ಮನುಷ್ಯರಿಗೆ ಬೆಲೆ ಕೊಡಿ. ಈ ಹೋರಾಟ ನಿಲ್ಲಲ್ಲ. ಇದು ಅಂತಃಕರಣದ ಹೋರಾಟ. ಬುದ್ದಿವಂತರ ರೀತಿ ಉತ್ತರ ಕೊಡಬೇಡಿ. ನಾವು ನಿಮಗೆ ಪ್ರಶ್ನೆಯೇ ಕೇಳುತ್ತಿಲ್ಲ. ನಮ್ಮ ನೋವನ್ನು ಹೇಳುತ್ತಿದ್ದೇವೆ. ನಮಗೆ ನಮ್ಮ ಭೂಮಿ, ನಮ್ಮ ಹಕ್ಕು, ನಮ್ಮ ಬದುಕು ಬೇಕು ಎಂದು ನಟ ಪ್ರಕಾಶ್ ರಾಜ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ರೈತರ ಬಂಧನ; ಜಾಮೀನು ಪಡೆಯದಿರಲು ನಿರ್ಧಾರ: ದೇವನಹಳ್ಳಿ ಚಲೋ ಹೋರಾಟದ ಸ್ಥಳಕ್ಕೆ ಬುಧವಾರ ಸಂಜೆ 6 ಗಂಟೆಗೆ ಬಂದ ಡಿಸಿಪಿ ಸಜಿತ್ ನೇತೃತ್ವದ ತಂಡ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ನಿಲ್ಲಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಮಣಿಯದ ರೈತ ಮುಖಂಡ ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ಮಾವಳ್ಳಿ ಶಂಕರ್, ವರಲಕ್ಷ್ಮಿ ಮುಂತಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಏಳು ಗಂಟೆಯ ಸುಮಾರಿಗೆ ವೇದಿಕೆಗೆ ಬಂದ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು. ಪೊಲೀಸರ ಬಂಧನದ ಸುಳಿವು ಸಿಗುತ್ತಿದ್ದಂತೆ ಸ್ಥಳದಲ್ಲಿದ್ದ ಹೋರಾಟಗಾರರು, ಜಾಮೀನು ಪಡೆಯದಿರಲು ತೀರ್ಮಾನಿಸಿದರು. ಅಲ್ಲದೆ, ಈ ವೇಳೆ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತು.







