‘ಶೀಘ್ರ ಮಧ್ಯಪ್ರವೇಶ ಮಾಡಿ ದೇವನಹಳ್ಳಿ ರೈತರ ಪರ ನಿಲ್ಲಿ’ : ಕಾಂಗ್ರೆಸ್ ಹೈಕಮಾಂಡ್ಗೆ 65 ಚಿಂತಕರಿಂದ ಬಹಿರಂಗ ಪತ್ರ

ಮಲ್ಲಿಕಾರ್ಜುನ ಖರ್ಗೆ |PC : PTI
ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ರೈತರ ಭೂಸ್ವಾಧೀನ ವಿವಾದದಲ್ಲಿ ರಾಜ್ಯ ಸರಕಾರ ರೈತಪರ ತೀರ್ಪು ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ 65ಕ್ಕೂ ಹೆಚ್ಚು ವಿಜ್ಞಾನಿಗಳು, ಚಿಂತಕರು, ವಿದ್ವಾಂಸರು, ಬರಹಗಾರರು, ಕಲಾವಿದರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ‘ಬೆಂಗಳೂರು ವಿಮಾನ ನಿಲ್ದಾಣದ ಉತ್ತರಕ್ಕಿರುವ ದೇವನಹಳ್ಳಿ ತಾಲೂಕಿನ 13 ಗ್ರಾಮಗಳ ರೈತರು ಮೂರು ವರ್ಷಗಳಿಂದ ತಮ್ಮ ಫಲವತ್ತಾದ ಭೂಮಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಪ್ರಸ್ತಾಪಿಸಿರುವ 1,777 ಎಕರೆ ಕೃಷಿ ಭೂಮಿಯನ್ನು ‘ಹೈಟೆಕ್ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್’ಗಾಗಿ ಸ್ವಾಧೀನಪಡಿಸಿಕೊಳ್ಳುವ ವಿರುದ್ಧ ಅವರ ಪ್ರತಿರೋಧ ಅಚಲವಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಈ ಚಳುವಳಿಗೆ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಯುವಕರಂತಹ ತಳಮಟ್ಟದ ಸಂಘಟನೆಗಳು ಸಕ್ರಿಯ ಬೆಂಬಲ ನೀಡುತ್ತಿವೆ. ಈ ಪ್ರದೇಶವು ಬೆಂಗಳೂರಿಗೆ ತರಕಾರಿಗಳು, ಹಣ್ಣುಗಳು, ಹಾಲು ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳನ್ನು ಪೂರೈಸುವ ಮೂಲಕ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ‘ನಾವು ಸಾಯಲು ಸಿದ್ಧ, ಆದರೆ ನಮ್ಮ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ’ ಎಂಬ ಸಾಮೂಹಿಕ ಸಂಕಲ್ಪವನ್ನು ರೈತರು ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರವು ಜು.4ರಂದು ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಜು.15ರೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದೆ. ಇದರ ನಡುವೆಯೇ ಸರಕಾರದ ಕೆಲವು ವಲಯಗಳಿಂದ, ರೈತರ ಬೇಡಿಕೆಗಳನ್ನು ಈಡೇರಿಸಿದರೆ ‘ಅಭಿವೃದ್ಧಿಗೆ ಅಡ್ಡಿಯಾಗಬಹುದು’ ಎಂಬ ಆತಂಕದ ಮಾತುಗಳು ಕೇಳಿಬರುತ್ತಿವೆ. ಇಂತಹ ಹಿನ್ನಡೆಯು ರಾಜ್ಯ ಸರಕಾರದ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಲ್ಲದೆ, ಗ್ರಾಮೀಣ ಸಮುದಾಯಗಳಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಗಂಭೀರ ಹಾನಿ ಉಂಟುಮಾಡಲಿದೆ’ ಎಂದು ಬಹಿರಂಗ ಪತ್ರದಲ್ಲಿ ಎಚ್ಚರಿಸಲಾಗಿದೆ.
‘2013ರ ಭೂಸ್ವಾಧೀನ ಕಾಯಿದೆ ಅಡಿಯಲ್ಲಿ ಶೇ.70ರಷ್ಟು ಭೂಮಾಲಕರ ಸಮ್ಮತಿ ಅಗತ್ಯವಿದ್ದರೂ, ಕೆಐಎಡಿಬಿ ಯ 2022ರ ಸಮೀಕ್ಷೆಯು ದೇವನಹಳ್ಳಿಯಲ್ಲಿ ಶೇ.80ಕ್ಕಿಂತ ಹೆಚ್ಚು ರೈತರು ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಮ್ಮತಿಯಿಲ್ಲದೆ ಮುಂದುವರಿಯುವುದು ಕಾನೂನುಬಾಹಿರವಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಎತ್ತಿಹಿಡಿದಿರುವ ಸಾಮಾಜಿಕ ನ್ಯಾಯದ ತತ್ವಕ್ಕೆ ತಿಲಾಂಜಲಿಯಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಇವೆಲ್ಲವನ್ನೂ ಸರಿಪಡಿಸುವ ಭರವಸೆಯನ್ನು ವಿರೋಧ ಪಕ್ಷದಲ್ಲಿದ್ದ ಹಾಲಿ ಮುಖ್ಯಮಂತ್ರಿಗಳು ನೀಡಿದ್ದರು. ರಾಜ್ಯದ ಭೂ ಸುಧಾರಣೆ ಕಾಯ್ದೆಗೆ ಹಿಂದಿನ ಸರಕಾರ ತಂದಿರುವ ಮಾರಕ ತಿದ್ದುಪಡಿಗಳನ್ನು ಸರಿಪಡಿಸಿ ರೈತಪರ ನೀತಿ ನಿಲುವುಗಳನ್ನು ರೂಪಿಸುವ ಭರವಸೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುತ್ತದೆ. ಹಾಗಿದ್ದರೂ ಎರಡುವರೆ ವರ್ಷಗಳ ಅವಧಿ ಮುಗಿದರೂ ಸರಕಾರ ಗಮನಹರಿಸದೆ ಕೊಟ್ಟಿರುವ ವಚನವನ್ನು ಪಾಲಿಸುತ್ತಿಲ್ಲ’ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
‘ಕೆಐಎಡಿಬಿ ಕರ್ನಾಟಕದಾದ್ಯಂತ ಗಣನೀಯ ಪ್ರಮಾಣದ ಬಳಕೆಯಾಗದ ಭೂಮಿ ಹೊಂದಿದ್ದರೂ, ಫಲವತ್ತಾದ ಕೃಷಿಭೂಮಿಯ ಸ್ವಾಧೀನಕ್ಕೆ ಮುಂದಾಗಿರುವುದು ಪಾರದರ್ಶಕತೆ ಮತ್ತು ಭೂಬಳಕೆ ಯೋಜನೆಯ ಸಮಗ್ರತೆಯ ಬಗ್ಗೆ ಕಳವಳ ಮೂಡಿಸಿದೆ. ಸಿಎಜಿ ವರದಿಯು ಕೆಐಎಡಿಬಿಯ ಸ್ವಾಧೀನ ಮತ್ತು ಹಂಚಿಕೆ ಪದ್ಧತಿಗಳಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ. ಇತ್ತೀಚೆಗೆ, ಇಸ್ರೋ ಯೋಜನೆ ಮತ್ತು ನೈಸ್ ಯೋಜನೆಗಳಲ್ಲಿನ ವಿಳಂಬಕ್ಕೆ ಹೈಕೋರ್ಟ್ ಕೆಐಎಡಿಬಿ ವಿರುದ್ಧ ತೀರ್ಪು ನೀಡಿದೆ. ದೇವನಹಳ್ಳಿ ಪ್ರಕರಣದಲ್ಲಿ ಮೂರು ವರ್ಷಗಳ ವಿಳಂಬ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಾಗೆಯೇ, ‘ರೈತರು ಮತ್ತು ಕೈಗಾರಿಕಾ ವಲಯಗಳ ಅಭಿಪ್ರಾಯ ಸಲಹೆ ಸೂಚನೆ ಪಡೆದು ರಾಜ್ಯದ ಆಹಾರ ಭದ್ರತೆ ಮತ್ತು ರೈತರ ಹಿತಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೈಗಾರಿಕೆಗೆ ಅತ್ಯಗತ್ಯವಾಗಿರುವ ಭೂ ಖರೀದಿ ವ್ಯವಹಾರದ ನಿಟ್ಟಿನಲ್ಲಿ ಸಮಗ್ರ ನೀತಿ ರೂಪಿಸಿ, ಮತ್ತು ಈ ಮೂಲಕ ದೇಶಕ್ಕೆ ಒಂದು ಮಾದರಿ ನೀತಿಯನ್ನು ಕರ್ನಾಟಕ ಸರಕಾರ ಜು.15ರಂದು ಮುಂದಿಡಲಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಮನವಿಯ ಪ್ರತಿಯನ್ನು ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕರ್ನಾಟಕದ ಕಾಂಗ್ರೆಸ್ ಸಂಸದರಿಗೆ ರವಾನಿಸಲಾಗಿದೆ.
ಈ ಬಹಿರಂಗ ಪತ್ರಕ್ಕೆ ಇತಿಹಾಸಕಾರ ಪ್ರೊ.ರಾಮಚಂದ್ರ ಗುಹಾ, ಹಿರಿಯ ಸಾಹಿತಿ ದೇವನೂರ ಮಹಾದೇವ, ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ, ರಂಗಭೂಮಿ ಕಲಾವಿದೆ ಬಿ.ಜಯಶ್ರೀ, ಯುಎಎಸ್ ಮಾಜಿ ಉಪಕುಲಪತಿ ಪ್ರೊ.ಕೆ.ನಾರಾಯಣ ಗೌಡ, ಭಾಷಾಶಾಸ್ತ್ರಜ್ಞ ಡಾ.ಜಿ.ಎನ್.ದೇವ್ಯ, ನಿರ್ದೇಶಕ ಗಿರೀಶ್ ಕಾಸರವಳ್ಳಿ, ಹಿರಿಯ ನಟಿ ಅರುಂಧತಿ ನಾಗ್, ನಟ ಕಿಶೋರ್ ಕುಮಾರ್, ಸುರೇಶ್ ಹೆಬ್ಳೀಕರ್, ಪಾಂಡುರಂಗ ಹೆಗಡೆ ಸೇರಿದಂತೆ ಒಟ್ಟು 65ಕ್ಕೂ ಹೆಚ್ಚು ವಿದ್ವಾಂಸರು, ವಿಜ್ಞಾನಿಗಳು, ಚಿಂತಕರು, ಬರಹಗಾರರು, ಕಲಾವಿದರು ಮತ್ತು ನಾಗರಿಕ ಸಮಾಜದ ಮುಖಂಡರು ಸಹಿ ಮಾಡಿದ್ದಾರೆ.







