ಜಮೀನು ಹಸ್ತಾಂತರ ಬಳಿಕ ಜವಳಿ ಪಾರ್ಕ್ ಅಭಿವೃದ್ಧಿ: ಸಚಿವ ಶಿವನಂದ ಪಾಟೀಲ್

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 8: ‘ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನೂತನ ಜವಳಿ ಪಾರ್ಕ್ ಸ್ಥಾಪಿಸುವ ಸಂಬಂಧ ನೀರಾವರಿ ಇಲಾಖೆಯು ವಿಧಿಸಿರುವ ಷರತ್ತುಗಳನ್ನು ಕೈಬಿಡಲು ಕೋರಿದ್ದು, ಜಮೀನು ಹಸ್ತಾಂತರ ಬಳಿಕ ಜವಳಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು’ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎನ್.ಎಚ್.ಕೋನರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಮತ್ತು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನಲ್ಲಿ ನೂತನ ಜವಳಿ ಪಾರ್ಕ್‍ಗಳನ್ನು ಪಿಪಿಪಿ ಆಧಾರದಲ್ಲಿ ಪ್ರಾರಂಭಿಸಲು ಘೋಷಣೆ ಮಾಡಲಾಗಿದೆ’ ಎಂದು ತಿಳಿಸಿದರು.
ಉದ್ದೇಶಿತ ಜವಳಿ ಪಾರ್ಕ್‍ಗಳ ಸ್ಥಾಪನೆಯಿಂದ ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಆದರೆ, ನವಲಗುಂದದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಜಮೀನನ್ನು ಇಲಾಖೆಗೆ ವರ್ಗಾಯಿಸಲು ಕೆಲ ಷರತ್ತುಗಳನ್ನು ವಿಧಿಸಿದೆ. ಅವುಗಳನ್ನು ಕೈಬಿಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.
‘ನೀರಾವಳಿ ಇಲಾಖೆ ವಿಧಿಸಲಾದ ಷರತ್ತುಗಳನ್ನು ಸರಳೀಕರಣಗೊಳಿಸಬೇಕಾಗಿದೆ. ನವಲಗುಂದದ ಬೆಳವಟಿಗಿ ಕೃಷಿ ಸಂಶೋಧನಾ ಕೇಂದ್ರದ ಸರ್ವೆ ನಂ.608ರಲ್ಲಿನ 23 ಎಕರೆ ಪೈಕಿ 15 ಎಕರೆ ಜಮೀನನ್ನು ಇಲಾಖೆಗೆ ಹಸ್ತಾಂತರ ಮಾಡಿಕೊಂಡು ಜವಳಿ ಪಾರ್ಕ್ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು ಎಂದು ಶಿವಾನಂದ ಪಾಟೀಲ್ ಹೇಳಿದರು.







