ಆರೋಪಿ ಮೇಲೆ ಪೊಲೀಸ್ ದೌರ್ಜನ್ಯ, ‘ಕಸ್ಟೋಡಿಯಲ್ ಡೆತ್’ ಪ್ರಕರಣಗಳ ಕಡಿವಾಣಕ್ಕೆ ಮಾರ್ಗಸೂಚಿ : ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಆದೇಶ

ಬೆಂಗಳೂರು : ಪೊಲೀಸ್ ವಶದಲ್ಲಿರುವಾಗ ಆರೋಪಿಗಳ ಮೇಲೆ ನಡೆಯುವ ದೌರ್ಜನ್ಯ, ಕಸ್ಟೋಡಿಯಲ್ ಡೆತ್ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಠಿಣ ನಿಯಮಗಳ ಜಾರಿಗೊಳಿಸಲಾಗಿದೆ. ಪ್ರಕರಣದ ತನಿಖಾ ಅವಧಿಯಲ್ಲಿ ಸ್ಥಳೀಯ ಪೊಲೀಸರಿಂದ ನಡೆಯಬಹುದಾದ ತನಿಖಾ ವೈಫಲ್ಯ ಹಾಗೂ ಸಾಕ್ಷ್ಯನಾಶದ ಯತ್ನಗಳನ್ನು ತಡೆಯುವ ಸಲುವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(ಬಿಎನ್‍ಎಸ್‍ಎಸ್) ಅಡಿಯಲ್ಲಿ ಕಠಿಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಪೊಲೀಸ್ ಇಲಾಖೆ ಘನತೆಗೆ ಚ್ಯುತಿ ಉಂಟು ಮಾಡುವ ಈ ರೀತಿ ಪ್ರಕರಣಗಳ ತನಿಖಾ ಅವಧಿಯಲ್ಲಿ ಯಾವುದೇ ಹಂತದಲ್ಲಿಯೂ ನಿಯಮಗಳ ಉಲ್ಲಂಘನೆಯಾದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಾ.ಎಂ.ಎ.ಸಲೀಂ ಆದೇಶದಲ್ಲಿ ಎಚ್ಚರಿಸಿದ್ದಾರೆ.
ಪೊಲೀಸ್ ವಶದಲ್ಲಿ ಆರೋಪಿಗಳ ಮೇಲೆ ದೌರ್ಜನ್ಯ ಮತ್ತು ಕಸ್ಟೋಡಿಯಲ್ ಡೆತ್ ಪ್ರಕರಣಗಳಲ್ಲಿ ಸ್ಥಳೀಯ ತನಿಖಾ ಅಧಿಕಾರಿಗಳು ತನಿಖೆಯ ವೇಳೆ ಲೋಪ ಎಸಗುತ್ತಿದ್ದಾರೆ. ಎಫ್‍ಐಆರ್ ದಾಖಲು, ಸ್ಥಳ ಮಹಜರು ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳ ಕಲೆ ಹಾಕುವಲ್ಲಿ ತನಿಖಾಧಿಕಾರಿ ವಿಳಂಬ ಮಾಡುತ್ತಿದ್ದಾರೆ ಎಂಬಿತ್ಯಾದಿ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಮಾರ್ಗಸೂಚಿಗಳನ್ನು ರಚಿಸಿದೆ ಎಂದು ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
ಮಾರ್ಗಸೂಚಿಯ ಮುಖ್ಯಾಂಶಗಳು:
•ಪೊಲೀಸ್ ವಶದಲ್ಲಿರುವಾಗ ದೌರ್ಜನ್ಯ ನಡೆದ ಕೂಡಲೇ ಸ್ಥಳೀಯ ಠಾಣಾಧಿಕಾರಿ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‍ಐಆರ್ ದಾಖಲಿಸಬೇಕು. ಹಿರಿಯ ಅಧಿಕಾರಿಗಳಿಗೆ ತಕ್ಷಣ ವರದಿ ಸಲ್ಲಿಸಬೇಕು.
•ದೌರ್ಜನ್ಯ, ಕಸ್ಟೋಡಿಯಲ್ ಡೆತ್ ಪ್ರಕರಣಗಳು ನಡೆದರೆ ತಕ್ಷಣವೇ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು.
•ಸಂತ್ರಸ್ತರ ಹೇಳಿಕೆಗಳು ಮತ್ತು ಶವಪರೀಕ್ಷೆಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಆಡಿಯೋ-ವಿಡಿಯೋ ರೆಕಾರ್ಡ್ ಪ್ರಕ್ರಿಯೆಯೊಂದಿಗೆ ಮಾಡಬೇಕು.
•ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆಯಾದ ಬಳಿಕ ತನಿಖಾಧಿಕಾರಿಗಳು ಹಳೆಯ ಡೈರಿಗಳನ್ನು ಪರಿಶೀಲಿಸುವುದು ಮಾತ್ರವಲ್ಲದೆ, ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ಸರಿಯಾಗಿದೆಯೇ ಎಂದು ಮರುಪರಿಶೀಲಿಸಬೇಕು.
•ಆರೋಪಿತ ಅಧಿಕಾರಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸುವ ಮುನ್ನ ಸೂಕ್ತ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಅನುಮತಿ ಪಡೆಯಬೇಕು.
•ಹಿಂಸಾಚಾರ ಹಾಗೂ ಕಸ್ಟೋಡಿಯಲ್ ಡೆತ್ ಪ್ರಕರಣಗಳ ತನಿಖೆಯ ವೇಳೆ ಸ್ಥಳೀಯ ಪೊಲೀಸರು ಯಾವುದೇ ರೀತಿಯ ಪ್ರಭಾವ ಬೀರದಂತೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸದಂತೆ ತಡೆಯಲು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಈ ಆದೇಶ ಹೊರಡಿಸಲಾಗಿದೆ.






