ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸದಂತೆ ಸುತ್ತೋಲೆ ಹೊರಡಿಸಿದ ಡಿಜಿ-ಐಜಿಪಿ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ
ಬೆಂಗಳೂರು: ಸಿವಿಲ್ ಸ್ವರೂಪದ ಆಸ್ತಿ ವಿವಾದಗಳು ಮತ್ತು ಇತರೆ ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಸೂಕ್ತ ನ್ಯಾಯ ವ್ಯಾಪ್ತಿಯುಳ್ಳ ಸಿವಿಲ್ ನ್ಯಾಯಾಲಯಕ್ಕೆ ಮಾತ್ರ ಇಂತಹ ವಿವಾದಗಳನ್ನು ಬಗೆಹರಿಸುವ ಅಧಿಕಾರವಿದೆ ಎಂದು ಈ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಸ್ತಿಯ ಹಕ್ಕು ಅಥವಾ ಸ್ವಾಧೀನದ ಘೋಷಣೆಗೆ ಸಂಬಂಧಿಸಿದ ವಿವಾದಗಳು, ಸ್ಥಿರಾಸ್ತಿಯ ಮೇಲಿನ ಮಾಲಕತ್ವ ಮತ್ತು ಹಿಡುವಳಿಯ ಹಕ್ಕುಗಳಿಗೆ ಸಂಬಂಧಿಸಿದ ವ್ಯಾಜ್ಯಗಳು, ನ್ಯಾಯಾಲಯದ ಅಥವಾ ಸಕ್ಷಮ ಪ್ರಾಧಿಕಾರದ ನಿರ್ದೇಶನಗಳಿದ್ದರೂ ಸಹ, ವಿವಾದದಲ್ಲಿ ಗಂಭೀರವಾದ ಕ್ರಿಮಿನಲ್ ಅಪರಾಧದ ಅಂಶವು ಇರದಿದ್ದರೆ, ಪೊಲೀಸರು ಮಧ್ಯಪ್ರವೇಶಿಸಬಾರದು ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಯಾವುದೇ ಸಿವಿಲ್ ವಿವಾದವನ್ನು ಬಗೆಹರಿಸಲು ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರದಾರರಾಗಿ ಬಂದಾಗ, ಆ ವಿವಾದವು ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯವೆಂದು ಕಂಡುಬಂದರೆ, ಅದನ್ನು ಮೊಕದ್ದಮೆಯಾಗಿ ದಾಖಲಿಸಿಕೊಳ್ಳಬಾರದು. ಬದಲಿಗೆ, ದೂರದಾರರಿಗೆ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಲು ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಪರಾಧ ಅಂಶವಿದ್ದರೆ ಮಾತ್ರ ಕ್ರಮ:
ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೂರು ಬಂದಾಗ, ಅದು ಸ್ಪಷ್ಟವಾಗಿ ಗಂಭೀರವಾದ ಕ್ರಿಮಿನಲ್ ಅಪರಾಧದ ಅಂಶವನ್ನು ಒಳಗೊಂಡಿದ್ದರೆ (ಉದಾಹರಣೆಗೆ ವಂಚನೆ, ಬೆದರಿಕೆ, ಬಲವಂತದ ಪ್ರವೇಶ ಇತ್ಯಾದಿ), ಅಂತಹ ಸಂದರ್ಭಗಳಲ್ಲಿ ಅದನ್ನು ಮೊಕದ್ದಮೆಯಾಗಿ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ಅಲ್ಲದೆ, ಸಕ್ಷಮ ನ್ಯಾಯಾಲಯವು ಅಥವಾ ಪ್ರಾಧಿಕಾರವು ಕಡ್ಡಾಯವಾಗಿ ನಿರ್ದಿಷ್ಟ ಕ್ರಮ ಕೈಗೊಳ್ಳಲು ಸೂಚಿಸಿರುವಾಗ, ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಆದೇಶಗಳನ್ನು ಅನುಸರಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಮೂಲಕ ಆಸ್ತಿ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಸಿವಿಲ್ ನ್ಯಾಯವ್ಯವಸ್ಥೆಗೆ ಮಾತ್ರ ಸೀಮಿತಗೊಳಿಸಿರುವುದನ್ನು ಡಿಜಿ ಮತ್ತು ಐಜಿಪಿ ಕಚೇರಿ ಒತ್ತಿ ಹೇಳಿದೆ. ಈ ಮಾರ್ಗಸೂಚಿಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುತ್ತೊಲೆಯಲ್ಲಿ ತಿಳಿಸಿದ್ದಾರೆ.







