ಕ್ರಿಮಿನಲ್ ಪ್ರಕರಣಗಳ ಸಿಐಡಿ ತನಿಖೆಗಾಗಿ 10 ಕ್ರಮಗಳ ಮಾರ್ಗಸೂಚಿ : ಕಟ್ಟುನಿಟ್ಟಾಗಿ ಪಾಲಿಸಲು ಡಿಜಿಪಿ ಡಾ.ಎಂ.ಎ.ಸಲೀಂ ಸೂಚನೆ

ಬೆಂಗಳೂರು : ಅಪರಾಧ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಜಾರಿಗೊಳಿಸಿದ್ದಾರೆ.
ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, 10 ಅಂಶಗಳ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಅಧಿಕಾರಿಗಳಿಗೆ ಡಿಜಿಪಿ ನಿರ್ದೇಶಿಸಿದ್ದಾರೆ. ಅವುಗಳಲ್ಲಿ, ಸಿಐಡಿಗೆ ವರ್ಗಾವಣೆ ಬಗ್ಗೆ ಪೊಲೀಸ್ ಪ್ರಧಾನ ಕಚೇರಿಯ ಆದೇಶ ಸ್ವೀಕರಿಸಿದ ಘಟಕದ ಮುಖ್ಯಸ್ಥರು, ಕೂಡಲೇ ಸಂಬಂಧಿಸಿದ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಸೇರಿ ದಾಖಲೆಗಳನ್ನು ಮೂರು ದಿನಗಳೊಳಗಾಗಿ ತನ್ನ ಪರಿಶೀಲನೆಗೆ ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ತನಿಖಾಧಿಕಾರಿಗಳು ತನ್ನ ಘಟಕದ ಮುಖ್ಯಸ್ಥರಿಂದ ಸೂಚನೆ ಮತ್ತು ಆದೇಶಗಳನ್ನು ಸ್ವೀಕರಿಸಿದ ತಕ್ಷಣ, ಪ್ರಕರಣದ ಕೇಸ್ ಡೈರಿಯನ್ನು ದಿನಾಂಕ ಪ್ರಕಾರವಾಗಿ ನವೀಕರಿಸಬೇಕು. ಪೊಲೀಸ್ ಐಟಿ ತನಿಖೆಯ ಕ್ರಮಗಳನ್ನು ನವೀಕರಿಸಬೇಕು. ಬಾಕಿ ಇರುವ ತನಿಖಾ ಕ್ರಮ ಮತ್ತು ವಿಷಯಗಳನ್ನು ಪಟ್ಟಿ ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಸ್ಥಳೀಯ ತನಿಖಾಧಿಕಾರಿಗಳು ತನಿಖಾ ಕಡತವನ್ನು ಪರಿವಿಡಿಯೊಂದಿಗೆ ಕ್ರಮಬದ್ದವಾಗಿ ಸಿದ್ಧಗೊಳಿಸಬೇಕು. ಕಾಲಾನುಸಾರ ತನ್ನ ಹಿಂದಿನ ತನಿಖಾಧಿಕಾರಿ ಹಾಗೂ ತಾನು ಕೈಗೊಂಡ ತನಿಖೆ ಕುರಿತಂತೆ ಮತ್ತು ಬಾಕಿ ಇರುವ ತನಿಖೆ ಕ್ರಮ ಮತ್ತು ವಿಷಯಗಳನ್ನು ಒಳಗೊಂಡ ಒಂದು ವರದಿಯನ್ನು ಸಿದ್ಧಪಡಿಸಿಕೊಂಡು ತನ್ನ ಘಟಕದ ಮುಖ್ಯಸರಿಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಘಟಕದ ಮುಖ್ಯಸ್ಥರು ಆ ವರದಿ ಸ್ವೀಕರಿಸಿದ 2 ದಿನಗಳೊಳಗೆ ಸಿಐಡಿ ಘಟಕದ ಪೊಲೀಸ್ ಅಧೀಕ್ಷಕ(ಆಡಳಿತ)ರನ್ನು ಸಂಪರ್ಕಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ ಬಗ್ಗೆ ಮತ್ತು ಸ್ಥಳೀಯ ತನಿಖಾಧಿಕಾರಿಗಳೊಂದಿಗೆ ಪ್ರಕರಣವನ್ನು ಹಸ್ತಾಂತರಿಸುವ ಪೂರ್ವ ಸಭೆಯಲ್ಲಿ ಚರ್ಚಿಸಲು ದಿನಾಂಕ ನಿಗದಿಪಡಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಸಿಐಡಿ ಘಟಕದ ಪೊಲೀಸ್ ಅಧೀಕ್ಷಕರು, ಸ್ಥಳೀಯ ತನಿಖಾಧಿಕಾರಿಯಿಂದ ತನಿಖೆ ಕಡತದ ಹಸ್ತಾಂತರ ಪೂರ್ವಭಾವಿ ಸಭೆಯ ದಿನಾಂಕವನ್ನು ನಿಗಧಿಪಡಿಸಬೇಕು. ಈ ಸಭೆಯಲ್ಲಿ ಹಾಜರಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೈಗೊಂಡ ತನಿಖಾ ಕ್ರಮಗಳು, ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಹಾಗೂ ಸಂಗತಿಗಳ ಸಿಐಡಿಗೆ ವಿವರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಸಭೆಯಲ್ಲಿ ಹಾಜರಿರುವ ಸಿಐಡಿ ಅಧಿಕಾರಿಗಳಿಗೆ ತನಿಖೆಯಲ್ಲಿ ಕಡ್ಡಾಯವಿರುವ ಯಾವುದಾದರೂ ಕಾನೂನುಗಳನ್ನು ಪಾಲಿಸದೇ ಇರುವುದು ಕಂಡುಬಂದಲ್ಲಿ ಅಥವಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ಆದೇಶವಾಗಿದ್ದಲ್ಲಿ ಅಥವಾ ಸರಕಾರದಿಂದ ಅಥವಾ ಪೊಲೀಸ್ ಪ್ರಧಾನ ಕಚೇರಿಯಿಂದ ಪ್ರಕರಣ ಹಸ್ತಾಂತರ ತಡೆಯುವ ಯಾವುದೇ ಸೂಚನೆಗಳಿದ್ದರೆ ಗಮನಕ್ಕೆ ತರಬೇಕು. ಮುಂದಿನ ಆದೇಶದ ಬಳಿಕ ಪ್ರಕರಣಗಳನ್ನು ಸಿಐಡಿ ಸ್ವೀಕರಿಸಬೇಕು. ಸಿಐಡಿ ಸ್ವೀಕರಿಸದ ಪ್ರಕರಣಗಳನ್ನು ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಸಿಐಡಿ ಅಧಿಕಾರಿಗಳು ತನಿಖೆ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಅಥವಾ ಸಾಕ್ಷ್ಯ ಸಂಗ್ರಹಕ್ಕೆ ಸ್ಥಳದಲ್ಲಿ ಮೊಕ್ಕಾಂ ಹೂಡಿದಾಗ, ಆಯಾ ಘಟಕದ ಮುಖ್ಯಸ್ಥರು ಸಿಐಡಿ ಅಧಿಕಾರಿಗಳ ಕೋರಿಕೆ ಮೇಲೆ ಅಗತ್ಯ ಸಿಬ್ಬಂದಿ, ವಾಹನ ಮತ್ತು ಇತರೆ ಸೌಲಭ್ಯವನ್ನು ಪೂರೈಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತನಿಖಾ ಸಮಯದಲ್ಲಿ ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಿಚಾರಣೆ ಮಾಡಿ ಘಟಕದ ನಿರ್ದಿಷ್ಟ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲು ಉದ್ದೇಶಿಸಿದಾಗ ಘಟಕಾಧಿಕಾರಿಗಳು ಸಂಬಂಧಪಟ್ಟ ಠಾಣಾಧಿಕಾರಿಗೆ ಲಾಕಪ್ ವ್ಯವಸ್ಥೆ ಮಾಡಲು ಸೂಚನೆ ನೀಡಬೇಕು. ಪ್ರಕರಣ ಸುಗಮ ತನಿಖೆಗಾಗಿ ಸಿಐಡಿ ತನಿಖಾಧಿಕಾರಿಗಳೊಂದಿಗೆ ಘಟಕಾಧಿಕಾರಿಗಳು ಸದಾ ಸಮನ್ವಯತೆ ಸಾಧಿಸಬೇಕು ಎಂದು ಸುತ್ತೋಲೆಯಲ್ಲಿ ಡಿಜಿಪಿ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.







