ಧರ್ಮಸ್ಥಳ ಪ್ರಕರಣ | ಅಸಹಜ ಸಾವು ಪ್ರಕರಣಗಳ ನಿಖರ ತನಿಖೆಗೆ ನಿರ್ದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮಹಿಳಾ ಆಯೋಗ ಪತ್ರ

ಡಾ.ಶಾಲಿನಿ ರಜನೀಶ್/ಡಾ.ನಾಗಲಕ್ಷ್ಮೀ ಚೌಧರಿ
ಬೆಂಗಳೂರು : ಧರ್ಮಸ್ಥಳದಲ್ಲಿ ವರದಿಯಾಗಿದ್ದ 30 ಅಸಹಜ ಸಾವು (ಯುಡಿಆರ್) ಪ್ರಕರಣಗಳ ವ್ಯತ್ಯಾಸ ಹಾಗೂ ಬೆಳ್ತಂಗಡಿ ಯುಡಿಆರ್ ಸಂ.69/2003ರ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ನಿಖರ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸೋಮವಾರ ಸಿಎಸ್ ಡಾ.ಶಾಲಿನಿ ರಜನೀಶ್ಗೆ ಪತ್ರ ಬರೆದಿರುವ ಅವರು, ಪತ್ತೆಯಾಗಿರುವ 7 ಮಾನವ ಅಸ್ತಿ ಪಂಜರಗಳ ಡಿಎನ್ಎ ಹಾಗೂ ವಿಧಿವಿಜ್ಞಾನ ವರದಿಗಳನ್ನು ಶೀಘ್ರವಾಗಿ ಪಡೆದು ಮೃತರ ಗುರುತು ಪತ್ತೆ ಹಚ್ಚಬೇಕು. ಎಲ್ಲ ಪ್ರಕರಣಗಳು/ವಿಷಯಗಳನ್ನು ಪೊಲೀಸ್ ಮಹಾನಿರ್ದೇಶಕರ ಮುಖಾಂತರ ಈಗಾಗಲೇ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸಿ, ಅಗತ್ಯವಿದ್ದಲ್ಲಿ ಎಸ್ಐಟಿ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿ ಸರಕಾರಿ ಆದೇಶ ಹೊರಡಿಸಿ ಎಂದು ಕೋರಿದ್ದಾರೆ.
ತನಿಖೆಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳು, ರಿಜಿಸ್ಟರ್ಗಳು ಹಾಗೂ ವೈದ್ಯಕೀಯ ವರದಿಗಳು ಸುರಕ್ಷಿತವಾಗಿರುವಂತೆ ಆಡಳಿತಾತ್ಮಕ ನಿರ್ದೇಶನ ನೀಡಬೇಕು. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಯುಡಿಆರ್ ಪ್ರಕರಣಗಳು ಹಾಗೂ ಪತ್ತೆಯಾಗಿರುವ 7 ಮಾನವ ತಲೆಬುರುಡೆ/ಅಸ್ತಿಪಂಜರಗಳ ಕುರಿತು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಯುಡಿಆರ್ ಪ್ರಕರಣಗಳ ವ್ಯತ್ಯಾಸವಿದ್ದು 1998ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ 1,480 ಯುಡಿಆರ್ ಪ್ರಕರಣಗಳು ದಾಖಲಾಗಿದ್ದರೆ, ಎಸ್ಸಿಆರ್ ಬಿ ಹಾಗೂ ಪಂಚಾಯತ್ ದಾಖಲೆಗಳಲ್ಲಿ 1,510 ಪ್ರಕರಣಗಳು ಕಂಡುಬಂದಿದ್ದು, ಒಟ್ಟು 30 ಪ್ರಕರಣಗಳ ವ್ಯತ್ಯಾಸ ಕಂಡುಬಂದಿವೆ. ಹಾಗೆಯೇ ಬೆಳ್ತಂಗಡಿ ಯುಡಿಆರ್ ಸಂ. 69/2003ರ ದಾಖಲೆಗಳಲ್ಲೂ ಅಸಂಗತತೆ ಇರುವುದು ವರದಿಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.






