ಬೆಳಗಾವಿ ಅಧಿವೇಶದಲ್ಲಿ ಧರ್ಮಸ್ಥಳ ಪ್ರಕರಣ ವರದಿ ಮಂಡನೆ : ಗೃಹ ಸಚಿವ ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ವರದಿ ನೀಡಲಿದ್ದು, ಬೆಳಗಾವಿ ಅಧಿವೇಶನದಲ್ಲಿ ಅದರಲ್ಲಿನ ಅಂಶಗಳ ವರದಿ ಮಂಡಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಲಿದ್ದಾರೆ. ಅದರಲ್ಲಿ ಏನಿದೆ, ಸತ್ಯ ಏನು ಎಲ್ಲವೂ ಗೊತ್ತಾಗುತ್ತದೆ. ಸರಕಾರಕ್ಕೂ ಅವರು ವರದಿ ಕೊಡುತ್ತಾರೆ. ವರದಿ ಬಂದ ಬಳಿಕ ಏನಿದೆ ಎಂದು ತಿಳಿಯಲಿದೆ ಎಂದರು.
ದರೋಡೆಕೋರರನ್ನು ಹಿಡಿಯುತ್ತೇವೆ :
ಬೆಂಗಳೂರು ಎಟಿಎಂ ವಾಹನ ದರೋಡೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಪೊಲೀಸರು ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ಖಂಡಿತಾ ದರೋಡೆಕೋರರನ್ನು ಹಿಡಿಯುತ್ತೇವೆ. ಘಟನೆ ವೇಳೆ ಯಾವೆಲ್ಲಾ ವಾಹನಗಳು ಓಡಾಡಿದ್ದವು? ರಾಜ್ಯದ ಹೊರಗೆ ಹೋಗಿರುವ ವಾಹನಗಳೆಷ್ಟು? ಎಲ್ಲದರ ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಅನುದಾನ:
ಕೇಂದ್ರ ಸರಕಾರ ನಮಗೆ ಕೊಡಬೇಕಾದ ಅನುದಾನದ ಹಣ ತೀರ ಕಡಿಮೆ ಕೊಟ್ಟಿದೆ. ಜಿಎಸ್ಟಿ ಪಾಲಿನಲ್ಲಿ ಕಡಿಮೆ ನೀಡಿದೆ. ಕೇಂದ್ರ ಸರಕಾರದ ಸಹಯೋಗದಲ್ಲಿ ಆಗುವ ಯೋಜನೆಗಳಲ್ಲಿ ಸರಿಯಾದ ಸಮಯದಲ್ಲಿ ಅನುದಾನ ಬಿಡುಗಡೆ ಮಾಡುವುದಿಲ್ಲ. ಜಲ ಜೀವನ್ ಮಿಷನ್ ಯೋಜನೆಯ ಸಾಕಷ್ಟು ಅನುದಾನ ಬಾಕಿ ಇದೆ ಎಂದು ಅವರು ಟೀಕಿಸಿದರು.
ಇಡೀ ದೇಶದಲ್ಲಿ ಮನೆಮನೆಗೆ ಗಂಗೆ, ನೀರು ತಲುಪಿಸುತ್ತೇವೆ ಎಂದು ಹೇಳುತ್ತಾರೆ. ಅದರ ಹಣವನ್ನು ರಾಜ್ಯ ಸರಕಾರವೇ ಭರಿಸುತ್ತಿದೆ. ಮುಖ್ಯಮಂತ್ರಿಗಳು ಅನುಭವಿ ಹಣಕಾಸು ಸಚಿವರು. 17ನೆ ಬಾರಿ ಬಜೆಟ್ ಮಂಡಿಸುವವರಿದ್ದಾರೆ. ಇದನ್ನೆಲ್ಲ ಚರ್ಚೆ ಮಾಡಿ, ಹಣಕಾಸಿನ ವಿಚಾರದಲ್ಲಿ ಒಂದಷ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.







