ಧರ್ಮಸ್ಥಳ ಪ್ರಕರಣ | ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿಯವರು ಹೇಳಿದ್ದರು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಅಂತಿಮ ವರದಿಯನ್ನು ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಸಂಪುಟ ಪುನರ್ ರಚನೆ ಕುರಿತು ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನ ನಾವು ಹೇಳಲು ಬರುವುದಿಲ್ಲ. ಅವರು ಏನು ತೀರ್ಮಾನ ಮಾಡುತ್ತಾರೆ ಕಾದು ನೋಡೋಣ. ದಿನನಿತ್ಯ ಮಾಧ್ಯಮದಲ್ಲಿ ಹೇಳಿಕೆ ಕೊಡಬಹುದು ಅಷ್ಟೇ. ಇಲ್ಲಿವರೆಗೆ ಹೈಕಮಾಂಡ್‌ನವರು ಏನಾದರು ಹೇಳಿದ್ದಾರೆಯೇ? ಸಂಪುಟ ಪುನರ್ ರಚನೆ, ನಾಯಕತ್ವ ಬದಲಾವಣೆ ಮಾಡುತ್ತೇವೆ ಎಂಬುದರ ಬಗ್ಗೆ ಹೈಕಮಾಂಡ್‌ನಿಂದ ಯಾವುದೇ ಮಾಹಿತಿ ಇಲ್ಲ. ಏನಾದರೂ ಹೈಕಮಾಂಡ್‌ನಿಂದ ಸೂಚನೆ ಬಂದಿದ್ದರೆ ನಾವು ಪ್ರತಿಕ್ರಿಯಿಸಬಹುದು. ಹೈಕಮಾಂಡ್ ತಿಳಿಸುವವರೆಗೂ ಯಾವುದಕ್ಕೂ ಮಹತ್ವ ಇರುವುದಿಲ್ಲ ಎಂದರು.
ಅಧಿಕಾರ ಹಂಚಿಕೆ, ಎರಡೂವರೆ ವರ್ಷ ಅಂತ ಚರ್ಚೆ ಆಯ್ತು. ಈಗ ಸಂಪುಟ ಪುನರ್ ರಚನೆ ಎನ್ನುತ್ತಿದ್ದಾರೆ. ಲೀಡರ್‌ಶಿಪ್ ಬದಲಾವಣೆ ಅಂತಾಯ್ತು. ದಿನನಿತ್ಯ ಈ ರೀತಿ ಗೊಂದಲಗಳಾಗುತ್ತಿದ್ದರೆ ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೆ? ಆಡಳಿತ ಚೆನ್ನಾಗಿ ಆಗಬೇಕು ಎಂದರೆ ಇದೆಲ್ಲ ನಿಲ್ಲಬೇಕು. ನೆರೆ ಹಾವಳಿ, ರಸ್ತೆ ಗುಂಡಿ ಬಿದ್ದಿದೆ ಈತರ ಮಾತುಗಳನ್ನು ನಿಲ್ಲಿಸಲು ಆಡಳಿತ ಚುರುಕುಗೊಳಿಸಬೇಕು. ಈ ಒಂದು ಗೊಂದಲದಲ್ಲಿ ನಾವು ಇರುವುದು ಸರಿಯಲ್ಲ ಎಂದು ಹೇಳಿದರು.
ಮುನಿಯಪ್ಪ ಸಿಎಂ ಆದರೆ ಸಂತೋಷ :
ಸಚಿವ ಮುನಿಯಪ್ಪ ಅವರು ಸಿಎಂ ಆಗಲಿ ಎಂದು ಶಿವಮೊಗ್ಗದಲ್ಲಿ ಘೋಷಣೆ ಕೂಗಿರುವ ಬಗ್ಗೆ ಪ್ರತಿಕ್ರಿಯಿಸಿ, ಕೆ.ಎಚ್.ಮುನಿಯಪ್ಪ ಅವರು ಏಳು ಬಾರಿ ಎಂಸಂಸದರಾಗಿದ್ದವರು. ಇದು ಸಾಮಾನ್ಯವಲ್ಲ. ಪಕ್ಷದಲ್ಲಿ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದರು. ಈಗ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಅವರು ಸಮರ್ಥರಿದ್ದು, ಅರ್ಹತೆಯೂ ಇದೆ. ಮುನಿಯಪ್ಪನವರು ಸಿಎಂ ಆದರೆ ನಾನು ಸಂತೋಷ ಪಡುವವನೆ ಎಂದರು.







