ಧರ್ಮಸ್ಥಳ ದೂರು ; ಅಸ್ಥಿ ಪಂಜರ ಸಿಕ್ಕಿದ ಸ್ಥಳದ ಮಹಜರು ಮಾಡುತ್ತಿಲ್ಲ ಯಾಕೆ ಎಂದು ಕೇಳಿದ ದೂರುದಾರನ ವಕೀಲರು
ತನಿಖೆಯಲ್ಲಿ ಪೊಲೀಸರಿಂದ ಆಘಾತಕಾರಿ ವಿಳಂಬ, ವಿನಾಕಾರಣ ಆರೋಪ : ದೂರುದಾರನ ವಕೀಲರು

ಮಂಗಳೂರು: ಧರ್ಮಸ್ಥಳ ದೂರುದಾರನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಜುಲೈ 11ಕ್ಕೆ ಬೆಳ್ತಂಗಡಿ ನ್ಯಾಯಾಲಯ ಹಾಗು ಪೊಲೀಸ್ ಠಾಣೆಗೆ ಭೇಟಿ ನೀಡಿ ವಿವರವಾದ ಹೇಳಿಕೆ ನೀಡಿ, ಅಸ್ತಿ ಪಂಜರವನ್ನು ಒಪ್ಪಿಸಿದ್ದರೂ ಈವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸರಿಯಾದ ತನಿಖೆ ಮಾಡುತ್ತಿಲ್ಲ, ಬದಲಾಗಿ ದೂರುದಾರ ಸಾಕ್ಷಿಯನ್ನೇ ಶಂಕಿಸುತ್ತಿದ್ದಾರೆ ಎಂದು ಅವರ ಪರ ವಕೀಲರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಬುಧವಾರ ವಕೀಲರು ಹಾಗು ದೂರುದಾರ ಧರ್ಮಸ್ಥಳಕ್ಕೆ ಬಂದು ಹಾಗೇ ವಾಪಸ್ ಹೋಗಿದ್ದರು. ಅವರನ್ನು ಪೊಲೀಸರು ಭೇಟಿ ಮಾಡಲಿಲ್ಲ. ದೂರುದಾರ ಪೊಲೀಸರಿಗೆ ಒಪ್ಪಿಸಿದ ಅಸ್ತಿ ಪಂಜರ ತೆಗೆದಿರುವ ಸ್ಥಳದ ಮಹಜರು ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಹಾಗಾಗಲಿಲ್ಲ. ಹಾಗೆ ಬಂದು ವಾಪಸ್ ಹೋಗಿರುವ ದೂರುದಾರ ಹಾಗು ಅವರ ವಕೀಲರು ಈಗ ಪತ್ರಿಕಾ ಪ್ರಕಟಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರನ್ನು ದೂರಿದ್ದಾರೆ.
ದೂರುದಾರನ ವಕೀಲರಾದ ಧೀರಜ್ ಎಸ್ ಜೆ ಮತ್ತು ಅನನ್ಯ ಗೌಡ ಅವರು ಇನ್ನಿಬ್ಬರು ವಕೀಲರಾದ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ ಮೂಲಕ ಈ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಬುಧವಾರ ಜುಲೈ 16 ರಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯವರು ನೀಡಿರುವ ಹೇಳಿಕೆ ನೋಡಿ ನಮಗೆ ಆಶ್ಚರ್ಯವಾಗಿದೆ. ಪೊಲೀಸರು ಈ ದೂರಿನ ಹಿಂದಿನ ಉದ್ದೇಶವನ್ನೇ ಮರೆಮಾಚುತ್ತಿದ್ದಾರೆ. ಆ ದೂರುದಾರನನ್ನು ಪೊಲೀಸರು ಕರೆದಿರಲಿಲ್ಲ, ಅಲ್ಲಿ ಯಾವುದೇ ತನಿಖೆ ನಡೆಯುತ್ತಿರಲಿಲ್ಲ, ಆತನನ್ನು ಬರಲು ಪೊಲೀಸರು ಹೇಳಿರಲಿಲ್ಲ. ಅಥವಾ ಅಲ್ಲಿ ಹೂತು ಹಾಕಲಾಗಿರುವ ನೂರಾರು ಶವಗಳ ಬಗ್ಗೆ ಯಾರೂ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಪಾಪ ಪ್ರಜ್ಞೆಯಿಂದ ಈ ಅಮಾನುಷ ಕೃತ್ಯಗಳು ಬಯಲಿಗೆ ಬರಬೇಕು ಹಾಗು ತಾರ್ಕಿಕ ಅಂತ್ಯ ಕಾಣಬೇಕು ಎಂಬ ಉದ್ದೇಶದಿಂದ ದೂರುದಾರ ಮುಂದೆ ಬಂದು ದೂರು ಸಲ್ಲಿಸಿದ್ದಾರೆ. ಇದನ್ನು ಪೊಲೀಸರು ತಮ್ಮ ಹೇಳಿಕೆಗಳಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ದೂರುದಾರ ತನ್ನ ಹೆಸರು ಬಹಿರಂಗಪಡಿಸದೇ ಇರುವುದು ಯಾವುದೇ ತನಿಖೆ ಅಥವಾ ಪರಿಶೀಲನೆಯನ್ನು ತಪ್ಪಿಸುವ ಉದ್ದೇಶದಿಂದಲ್ಲ. ಆತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ವಕೀಲರ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿ ಎಫ್ ಐ ಆರ್ ದಾಖಲಿಸುವಂತೆ ಮಾಡಿದ್ದಾರೆ. ಕೆಲವೊಂದು ಮಾಹಿತಿಗಳು ಈಗಾಗಲೇ ಜನರಿಗೆ ತಿಳಿದಿರುವುದರಿಂದ ದೂರುದಾರನಿಗೆ ರಕ್ಷಣೆ ಕೊಡುವ ಜವಾಬ್ದಾರಿ ನಮಗಿಲ್ಲ ಎಂಬಂತೆ ಪೊಲೀಸರು ಹೇಳಿಕೆ ನೀಡುವುದು ಅವರೇ ನೀಡಿರುವ ಪತ್ರ ಹಾಗು ಸಾಕ್ಷಿ ರಕ್ಷಣೆ ಸ್ಕೀಮ್ 2018ರ ಉಲ್ಲಂಘನೆಯಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ದೂರುದಾರ ತನ್ನ ದೂರು ಹಾಗು ಎಫ್ ಐ ಆರ್ ಅನ್ನು ಬಿಡುಗಡೆ ಮಾಡಲು ತನ್ನ ವಕೀಲರಿಗೆ ಹೇಳಿದ್ದರೇ ಎಂದು ಕೇಳುವುದು ಆಕ್ಷೇಪಾರ್ಹವಾಗಿದೆ. ಈ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಬಗ್ಗೆ ಪೊಲೀಸರು ಯಾಕೆ ಕಳವಳ ಪಡಬೇಕು ಎಂದು ಅರ್ಥವಾಗುತ್ತಿಲ್ಲ. ಹೀಗೆ ದೂರುದಾರ ಆತನ ವಕೀಲರಲ್ಲಿ ಏನು ಹೇಳಿದ್ದಾನೆ ಎಂದು ಕೇಳುವುದು ಕಕ್ಷಿದಾರ ಹಾಗು ವಕೀಲನ ನಡುವಿನ ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.
ದೂರುದಾರನ ವಿಳಾಸ ನಮಗೆ ಗೊತ್ತಿಲ್ಲ ಎಂದು ಪೊಲೀಸರು ಹೇಳುವುದು ತಪ್ಪಾಗಿದೆ. ಜುಲೈ 14 ರಂದು ಪೊಲೀಸರು ನಾಲ್ಕು ಗಂಟೆಗೂ ಹೆಚ್ಚು ಕಾಲ ಒಂದು ನಿರ್ದಿಷ್ಟ ಸ್ಥಳದಲ್ಲಿ ದೂರುದಾರನ ಹೇಳಿಕೆ ದಾಖಲಿಸಿದ್ದಾರೆ. ಜುಲೈ 13 ಕ್ಕೆ ದೂರುದಾರನ ಹಾಲಿ ವಿಳಾಸವನ್ನು ಪೊಲೀಸರಿಗೆ ನೀಡಲಾಗಿದೆ. ಹೀಗಿರುವಾಗ ದೂರುದಾರ ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದು ಪೊಲೀಸರು ಹೇಳುವುದು ಸರಿಯಲ್ಲ ಎಂದು ವಕೀಲರು ಹೇಳಿದ್ದಾರೆ.
ಜುಲೈ 11 ಕ್ಕೆ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ ಕೆಲವು ನಿರ್ದಿಷ್ಟ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ.
ಹಾಗಾಗಿ ದೂರುದಾರನಿಗೆ ತನ್ನ ರಕ್ಷಣೆಯ ಬಗ್ಗೆ ಕಳವಳವಿದೆ. ದೂರುದಾರ ಬಯಲು ಮಾಡುವ ಒಂದೊಂದು ಸಾಕ್ಷ್ಯವೂ ಆತನ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಇಲ್ಲವಾಗಿಸುತ್ತಾ ಹೋಗುತ್ತದೆ ಎಂದು ದೂರುದಾರನಿಗೆ ಗೊತ್ತಿದೆ. ಪ್ರತಿ ಅಸ್ತಿ ಪಂಜರವನ್ನು ವಶ ಪಡಿಸಿಕೊಂಡು ಹೋದಂತೆ ಆತನ ಪ್ರಾಣಕ್ಕೆ ಇರುವ ಅಪಾಯ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ದೂರುದಾರ ನಂಬಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಜುಲೈ 11ರಂದು BNSS ಸೆಕ್ಷನ್ 183ರ ಪ್ರಕಾರ ದಾಖಲಾದ ಹೇಳಿಕೆಯಲ್ಲಿ ದೂರುದಾರ ಸ್ವಯಂಪ್ರೇರಣೆಯಿಂದ ಪೊಲೀಸ್ ಅಧಿಕಾರಿಗಳಿಗೆ ಮಾನವ ಅವಶೇಷಗಳನ್ನು ಒಂದು ನಿರ್ದಿಷ್ಟ ಸ್ಥಳದಿಂದ ಹಸ್ತಾಂತರಿಸಿದ್ದಾರೆ. ಈ ಪ್ರಕ್ರಿಯೆ ಹಲವು ಗಂಟೆಗಳ ಕಾಲ ನಡೆಯಿತು. ವಿಧಿವಿಜ್ಞಾನ ತಜ್ಞರ ತಂಡವೂ ಆಗಲೇ ಅವಶೇಷಗಳನ್ನು ವಶಪಡಿಸಿಕೊಂಡಿತ್ತು. ಮರುದಿನವೇ, ಪೊಲೀಸರು ಮಹಜರು ಮತ್ತು ದಾಖಲಾತಿಗಾಗಿ ಆ ಸ್ಥಳಕ್ಕೆ ಹಿಂದಿರುಗುತ್ತಾರೆ ಎಂದು ದೂರುದಾರ ಭಾವಿಸಿದ್ದರು. ಆದರೆ, ಜುಲೈ 16ರವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಸಾಕ್ಷಿ ಒದಗಿಸಿರುವ ಅತ್ಯಂತ ಬಲವಾದ ಪುರಾವೆಗಳನ್ನು ಪೊಲೀಸರು ನಿರ್ಲಕ್ಷಿಸಿದ್ದಾರೆ. ಹೂತಿರುವ ಸ್ಥಳಗಳ ಗುರುತೂ ಪತ್ತೆ ಮಾಡದಿರುವುದು ದೂರುದಾರನಿಗೆ ಆತಂಕ ಹಾಗು ಆಘಾತ ತಂದಿದೆ ಎಂದು ಅವರ ವಕೀಲರು ಹೇಳಿದ್ದಾರೆ.
ಅಧಿಕಾರಿಗಳು ತಮ್ಮ ಶಾಸನಬದ್ಧ ಜವಾಬ್ದಾರಿಗಳನ್ನು ನ್ಯಾಯಸಮ್ಮತವಾಗಿ ನಿರ್ವಹಿಸಬೇಕೆಂದು ನಾವು ಮನವಿ ಮಾಡುತ್ತೇವೆ. ದೂರುದಾರರನ್ನು ವಿರೋಧಿಯಾಗಿ ಪರಿಗಣಿಸದೇ, ಐತಿಹಾಸಿಕ ತಪ್ಪನ್ನು ಬಯಲಿಗೆ ತರಲು ಧೈರ್ಯದಿಂದ ಮುಂದಾದ ವ್ಯಕ್ತಿಯೆಂದು ಪರಿಗಣಿಸಬೇಕು. ದೂರುದಾರರು ಇನ್ನೂ ಜೀವಂತವಾಗಿದ್ದಾರೆ. ಅವರು ತನಿಖೆಗೆ ಸಹಕಾರ ನೀಡಲು ಸಿದ್ಧರಾಗಿದ್ದಾರೆ. ಲಭ್ಯವಿದ್ದಾರೆ. ಅವರು ಸೂಚಿಸಿದಂತೆ, ಹೂತಿರುವ ಹೊರತೆಗೆಯಬಹುದಾದ ಅವಶೇಷಗಳನ್ನು ಹೊರತೆಗೆಯುವುದರಿಂದ ತನಿಖೆಗೆ ಮತ್ತಷ್ಟು ನೆರವಾಗಲಿದೆ ಎಂದು ವಕೀಲರು ಆಗ್ರಹಿಸಿದ್ದಾರೆ.







