ಸಂಚಲನ ಸೃಷ್ಟಿಸಿದ ʼದೂತ - ಸಮೀರ್ʼ ವೀಡಿಯೊ; ರಾಜ್ಯಾದ್ಯಂತ ಅಲರ್ಟ್ ಆಗುವಂತೆ ಪೊಲೀಸರಿಗೆ ಸೂಚಿಸಿದ ಡಿಜಿಪಿ

ಸಾಂದರ್ಭಿಕ ಚಿತ್ರ PC: NDTV
ಬೆಂಗಳೂರು : ಇಡೀ ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆದಿದ್ದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಯೂಟ್ಯೂಬರ್ "ದೂತ ಸಮೀರ್" ಮಾಡಿರುವ ವಿಡಿಯೋ ಸಂಚಲನ ಸೃಷ್ಟಿಸಿದ್ದ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ರಾಜ್ಯಾದ್ಯಂತ ನಿಗಾ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ.
ಬುಧವಾರ ಈ ಕುರಿತು ಫ್ಯಾಕ್ಸ್ ಮೂಲಕ ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ಸಂದೇಶ ರವಾನಿಸಿರುವ ಅವರು, ಇತ್ತೀಚಿಗೆ ಸಮೀರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಮಾಡಿದ್ದು, ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ, ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ, ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದೆ. ಆದ್ದರಿಂದ, ಘಟಕಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಸೆಲ್ ಗಳನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿದೆ.
ಅದೇ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್ ಗಳ ಕುರಿತು ನಿಗಾ ಇಟ್ಟು ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಗೆ ಮಾಹಿತಿ ನೀಡುವಂತೆ ಸೂಚನೆ ಹೊರಡಿಸಲಾಗಿದೆ.







