ಮಂತ್ರಾಕ್ಷತೆ ಅಕ್ಕಿಯನ್ನು ಡಿಕೆಶಿ ಅವರ ದೊಡ್ಡ ಆಲದಹಳ್ಳಿಯ ತೋಟದಲ್ಲಿ ಬೆಳೆದು ಕೊಟ್ಟಿದ್ದಾರೆಯೇ: ಕುಮಾರಸ್ವಾಮಿ ಪ್ರಶ್ನೆ
ನಮ್ಮ ಅಕ್ಕಿ ಎಂದ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಎಚ್‌ಡಿಕೆ

ಬೆಂಗಳೂರು: ನಮ್ಮ ಅಕ್ಕಿ ಬಳಸಿಕೊಂಡು ಜನತೆಗೆ ಬಿಜೆಪಿಯವರು ಮಂತ್ರಾಕ್ಷತೆ ಹಂಚುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ; ಇವರ ಅಕ್ಕಿ ಎಂದರೆ ದೊಡ್ಡ ಆಲದಹಳ್ಳಿಯ ಅವರ ತೋಟದಲ್ಲಿ ಬೆಳೆದಿರುವುದಾ? ಎಂದು ಪ್ರಶ್ನಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼರಾಜಕೀಯ ಮಾಡುತ್ತಿರುವುದು ಅವರು ಅಕ್ಕಿಯನ್ನು ತಮ್ಮ ಸ್ವಗ್ರಾಮ ದೊಡ್ಡ ಆಲದಹಳ್ಳಿಯಲ್ಲಿ ಬೆಳೆದು ಕಳಿಸಿ ಕೊಟ್ಟಿದ್ದಾರೆಯೇ? ಎಂದು ಅವರು ಡಿಕೆಶಿ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಮ ಮಂದಿರಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದು ದೂರಿರುವ ಡಿಕೆಶಿ ಆರೋಪದ ಬಗ್ಗೆ ಪ್ರತ್ಯುತ್ತರ ನೀಡಿದ ಅವರು, ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಉದ್ಘಾಟನೆ ದಿನ ಗೊಂದಲ ಆಗುವುದು ಬೇಡ. ಮುಂದೆ ದೇವಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದಾಗ ಎಲ್ಲರೂ ಶ್ರೀರಾಮ ದೇವರ ದರ್ಶನ ಪಡೆಯಬಹುದು. ಆಗ ಯಾರು ಬೇಕಾದರೂ ಹೋಗಬಹುದು ಎಂದು ಚಾಟಿ ಬೀಸಿದರು.
ಮಾಜಿ ಪ್ರಧಾನಿಗಳ ಆರೋಗ್ಯದ ಪರಿಸ್ಥಿತಿಗಳ ಆಧಾರದ ಮೇಲೆ ಹೋಗುವ ಬಗ್ಗೆ ಮುಂದೆ ನಿರ್ಧಾರ ಮಾಡುತ್ತೇವೆ. ದೇವೇಗೌಡರು ಪ್ರಯಾಣ ಮಾಡುವುದಕ್ಕೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಏನಿದೆ, ಅದರ ಮೇಲೆ ಹೋಗಬೇಕಾ? ಬೇಡವಾ ಅಂತ ತೀರ್ಮಾನ ಮಾಡುತ್ತೇವೆ ಎಂದರು







