ಗ್ಯಾರಂಟಿ ಯೋಜನೆ ಬೇಡ ಎಂದಿಲ್ಲ, ಪರಿಷ್ಕರಣೆಗೆ ಸಲಹೆ ನೀಡಿದ್ದೇನೆ : ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಬೆಂಗಳೂರು, ಆ.14: ನಾನು ಗ್ಯಾರಂಟಿ ಯೋಜನೆ ಕಟ್ ಮಾಡಲು ಹೇಳಿಲ್ಲ, ಪರಿಷ್ಕರಣೆ ಮಾಡುವುದಕ್ಕೆ ಸಲಹೆ ನೀಡಿದ್ದೇನೆ. ಜನರು ಏನು ಮಾತನಾಡ್ತಾರೆ ಅದನ್ನು ಹೇಳಿದ್ದೇನೆ ಅಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಿದ್ರೆ 10 ಸಾವಿರ ಕೋಟಿ ರೂ. ಉಳಿಸಬಹುದು. ಈ ಕಾರಣಕ್ಕೆ ಪರಿಷ್ಕರಣೆ ಮಾಡಿ ಅಂತ ಮಾತ್ರ ಹೇಳಿದ್ದೇನೆ. ನಾನು ಜನರ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇನೆ. ವಿಪಕ್ಷದವರಂತೆ ಕಟ್ ಮಾಡಿ ಅಂತ ಹೇಳಿಲ್ಲ ಎಂದವರು ಹೇಳಿದ್ದಾರೆ.
ಶಾಸಕರಿಗೆ ಅನುದಾನ ಕೊರತೆ ಆಗುತ್ತಿದ್ದರೆ ಬಜೆಟ್ ಬುಕ್ ಓದಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಅನುದಾನ ನೀಡಿದ್ದಾರೆ. ಬೊಮ್ಮಾಯಿ ಸರ್ಕಾರಕ್ಕಿಂತ ಹೆಚ್ಚು ನಮ್ಮ ಸರ್ಕಾರ ನೀಡಿದೆ ಎಂದವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಚಿವ ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿ, ಹೈಕಮಾಂಡ್ ಹಂತದಲ್ಲಿ ನಡೆಯುವ ವಿಚಾರ. ಕೆಲವು ಹೆಸರುಗಳನ್ನು ಟಿವಿಯಲ್ಲಿ ನೋಡಿದೆ. ನನ್ನ ಹೆಸರು ಇಲ್ಲ ಅಂತ ಖುಷಿಯಾಯಿತು ಎಂದ ಅವರು, ಈ ಹಂತದಲ್ಲಿ ನಮ್ಮ ಡಿಮ್ಯಾಂಡ್ ಏನೂ ಇಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುವುದಾದರೆ ಪ್ರಾಂತ್ಯ, ಸಮುದಾಯವಾರು ನಿರ್ಧಾರ ಮಾಡಬೇಕು. ಯಾರು ಓಟು ತರುತ್ತಾರೆ ನೋಡಿ ಅಧ್ಯಕ್ಷರನ್ನಾಗಿ ಮಾಡಬೇಕು. ನಾನು ಮುಖ್ಯಮಂತ್ರಿ ರೇಸ್ ನಲ್ಲೂ ಇಲ್ಲ, ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲೂ ಇಲ್ಲ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.







