ದಿಗಂತ್ ನಾಪತ್ತೆ ಪ್ರಕರಣ | ಸುಳ್ಳು, ದ್ವೇಷ ಸೋತಿದೆ ; ಕೋಮು ಹುನ್ನಾರವೊಂದು ಬಯಲಾಗಿದೆ

ಮಂಗಳೂರು: ಫರಂಗಿಪೇಟೆಯ ಯುವಕ ದಿಗಂತ್ ಪತ್ತೆಯಾಗಿದ್ದು ಆ ಇಡೀ ಊರಿಗೆ, ದಿಗಂತ್ ಮನೆಯವರಿಗೆ ಹಾಗೂ ಪೊಲೀಸರಿಗೆ ಸಮಾಧಾನ ಹಾಗೂ ಸಂತಸ ತಂದಿದೆ. ಆದರೆ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಮಾತ್ರ ಇದರಿಂದ ತೀವ್ರ ನಿರಾಶೆಯಾಗಿದೆ. ಒಂದು ಸುವರ್ಣಾವಕಾಶ ಕೈತಪ್ಪಿತು ಎಂದು ಅವು ಬೇಸರದಲ್ಲಿವೆ.
ಫೆಬ್ರವರಿ 25 ರಂದು ಸಂಜೆ 7 ಗಂಟೆಗೆ ಕಾಣೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ದ್ವಿತೀಯ ಪಿಯು ವಿದ್ಯಾರ್ಥಿ ದಿಗಂತ್ ಕೊನೆಗೂ ಶನಿವಾರ ಮಾರ್ಚ್ 8 ರಂದು ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ಆತನ ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಫರಂಗಿಪೇಟೆಯ ಅಂಗಡಿ ಮುಂಗಟ್ಟನ್ನು ಬಂದ್ ಮಾಡಬೇಕೆಂದು ಹಿಂದುತ್ವ ಸಂಘಟನೆಗಳು ಕರೆ ಕೊಟ್ಟಿದ್ದವು. ಎಲ್ಲರೂ ಜಾತಿ ಧರ್ಮವೆನ್ನದೆ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದ್ದರು.
ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ನಾಪತ್ತೆ ಪ್ರಕರಣ ಸದನದಲ್ಲೂ ಸದ್ದು ಮಾಡಿತ್ತು. ಸಂಘ ಪರಿವಾರದ ಸಂಘಟನೆಗಳು ಹಾಗೂ ಬಿಜೆಪಿ ನಾಪತ್ತೆ ಪ್ರಕರಣಕ್ಕೆ ಹಿಂದೂ ಮುಸ್ಲಿಂ ಬಣ್ಣ ಹಚ್ಚಲು ಗರಿಷ್ಠ ಪ್ರಯತ್ನ ಪಟ್ಟಿದ್ದವು.
ಮುಸ್ಲಿಂ ಜನಸಂಖ್ಯೆ ಜಾಸ್ತಿ ಇರುವ ಫರಂಗಿಪೇಟೆಯ ಭಾಗದಲ್ಲಿ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದಾರೆ, ಅವರಿಂದಲೇ ಈ ಕೃತ್ಯ ನಡೆದಿದೆ ಎಂದು ಹಿಂದುತ್ವ ಸಂಘಟನೆಗಳು ಆರೋಪ ಮಾಡಿದ್ದವು. ಇದೇ ಧಾಟಿಯಲ್ಲಿ ಮಂಗಳೂರಿನ ಬಿಜೆಪಿ ಜನ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ತೀರಾ ಕೆಟ್ಟದಾಗಿ ಮಾತಾಡಿದ್ದರು.
ಇದೀಗ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ಸುಮಾರು 10 ದಿನಗಳ ಬಳಿಕ ಮಾ.8ರಂದು ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್ ಖಚಿತಪಡಿಸಿದ್ದಾರೆ. ಹೀಗಾಗಿ ಕರಾವಳಿಯಲ್ಲಿ ಮತ್ತೊಮ್ಮೆ ಕೋಮು ಬೆಂಕಿ ಹಚ್ಚುವ ಬಿಜೆಪಿ ಹಾಗೂ ಸಂಘ ಪರಿವಾರದ ಹುನ್ನಾರ ವಿಫಲವಾಗಿದೆ.
ಫರಂಗಿಪೇಟೆ ಮುಸ್ಲಿಂ ಬಾಹುಳ್ಯದ ಪ್ರದೇಶ ಎಂಬ ಒಂದೇ ಕಾರಣಕ್ಕೆ ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಹಾಗೂ ಇಡೀ ಊರಿಗೆ ಕ್ರಿಮಿನಲ್ ಹಣೆಪಟ್ಟಿ ಕಟ್ಟಲು ಮುಂದಾಗಿದ್ದರು ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು. ಈ ಹತ್ತು ದಿನದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಸಂಘ ಪರಿವಾರದ ನಾಯಕರು ಕೊಟ್ಟ ಪ್ರಚೋದನಕಾರಿ ಹೇಳಿಕೆಗಳು ಹೀಗಿವೆ.
►ಶಾಸಕ ಭರತ್ ಶೆಟ್ಟಿ:
ಈ ಪ್ರಕರಣ ಗಾಂಜಾ ಪ್ರಕರಣಕ್ಕೆ ಸಂಬಂಧ ಪಟ್ಟಿದೆ ಎಂದು ತುಂಬಾ ಜನ ಹೇಳುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆ ಮೇಲೆ ಗೌರವ, ನಂಬಿಕೆ ಕಳೆದು ಹೋದರೆ ಸಾರ್ವಜನಿಕರು ಮತ್ತು ನಾವು ಹೋರಾಟ ಮಾಡಬೇಕು ಎನ್ನುವ ಪ್ರಶ್ನೆ ನಮ್ಮನ್ನು ಖಂಡಿತ ಕಾಡುತ್ತಿದೆ.
ಅಮ್ಮೆಮ್ಮಾರ್ ಪ್ರದೇಶದಲ್ಲಿ ರಾತ್ರಿ ಹೊತ್ತು ನಡೆದುಕೊಂಡು ಹೋಗಲು ಆಗುವುದಿಲ್ಲ ಎಂಬ ಮಾತನ್ನು ಸ್ಥಳೀಯರು ಹಲವಾರು ದಿನಗಳಿಂದ ಹೇಳುತ್ತಾ ಬಂದಿದ್ದಾರೆ. ಆ ಜಾಗದಲ್ಲಿ ನಡೆದು ಕೊಂಡು ಹೋದರೆ ಅವರನ್ನು ತಡೆದು ನಿಲ್ಲಿಸಿ ನೀವು ಯಾರು ಏನು ಎಂದು ಕೇಳುವುದು, ಉಡಾಫೆ ಮಾತನ್ನು ಆಡುವುದು, ಬಂದವರಿಗೆ ಹೊಡೆಯುವ ವ್ಯವಸ್ಥೆ ಆ ಪ್ರದೇಶದಲ್ಲಿ ಆಗ್ತಾ ಇದೆ. ಪೊಲೀಸ್ ಇಲಾಖೆಯಲ್ಲಿ ಕೇಳಿದರೆ ನಮಗೆ ಗೊತ್ತಿಲ್ಲ ಅನ್ನುವ ಮಾತನ್ನು ಹೇಳುತ್ತಿದ್ದಾರೆ. 'ಸಾರ್ವಜನಿಕವಾಗಿ ನಮ್ಮ ಹುಡುಗರನ್ನು ಕಾಪಾಡಲು ನಾವೇ ತಂಡ ಮಾಡಬೇಕಾ ಇಲ್ಲ ಪೊಲೀಸ್ ಇಲಾಖೆ ಮಾಡುತ್ತದಾ' ಅನ್ನುವಂತಹ ಉತ್ತರ ಸರ್ಕಾರ ಕೊಡಬೇಕು.
ನಮ್ಮ ಹುಡುಗ ಅಥವಾ ಹುಡುಗಿ ಮಿಸ್ ಆದರೆ ಅದನ್ನು ಸಹಜ ಪ್ರಕರಣವೆಂದು ಪೊಲೀಸ್ ಮತ್ತು ಸರ್ಕಾರ ನಿರ್ಧರಿಸಿದರೆ ಸಾರ್ವಜನಿಕರು ಇನ್ನು ಮುಂದೆ ಕೈ ಕಟ್ಟಿ ಕುಳಿತು ಕೊಳ್ಳುವುದಿಲ್ಲ. ನಮ್ಮ ಇತಿ ಮಿತಿಯನ್ನು ಮೀರುವ ಪರಿಸ್ಥಿತಿ ನಮಗೆ ಬರಬಾರದು. ಪೊಲೀಸ್ ನವರಿಗೆ ಈಗ ವಿನಂತಿಸಿಕೊಳ್ಳುತ್ತಿದ್ದೇವೆ. ಇನ್ನು ಮುಂದೆ ವಿನಂತಿಸಿಕೊಳ್ಳುವ ಪರಿಸ್ಥಿತಿ ಬರುತ್ತೋ ಇಲ್ಲವೋ ಗೊತ್ತಿಲ್ಲ. ಸರಿಯಾದ ವಿಚಾರಣೆ ಮಾಡದಿದ್ದರೆ ಸಮಾಜ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ರಕ್ಷಣೆ ಪೊಲೀಸ್ ಇಲಾಖೆ ಮಾಡುವುದಿಲ್ಲ ಎಂದರೆ ಹೇಳಿ ಸಾರ್ವಜನಿಕವಾಗಿ ನಾವೇ ನಮ್ಮ ಟೀಮ್ ಅನ್ನು ಕಟ್ಟುತ್ತೇವೆ. ಸಾರ್ವಜನಿಕವಾಗಿ ನಮ್ಮ ತಂಡವನ್ನು ಕಟ್ಟಿಕೊಂಡು ನಮ್ಮ ಏರಿಯಾ ಕಾಪಾಡಿಕೊಳ್ಳುತ್ತೇವೆ.
ನಾವೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾ ಎಂಬ ಪ್ರಶ್ನೆ ಬರುವುದಕ್ಕಿಂತ ಮುಂಚೆ ಈ ಪ್ರಕರಣಕ್ಕೆ ಸರಿಯಾದ ಇತಿಶ್ರೀ ಹಾಡಿ ಎಂದು ಪೊಲೀಸ್ ಇಲಾಖೆಗೆ ಬೆದರಿಕೆ ಹಾಕಿದ್ದರು.
►ಪೊಲೀಸರಿಗೆ ಡೆಡ್ ಲೈನ್ ಕೊಟ್ಟಿದ್ದ ಶಾಸಕ ಹರೀಶ್ ಪೂಂಜಾ:
ಪೊಲೀಸ್ ಇಲಾಖೆಗೆ ಎಲ್ಲಾ ಸಂಘಟನೆಯವರು ಸೇರಿಕೊಂಡು ಒಂದು ದಿನಾಂಕ ಹೇಳಿದ್ದೇವೆ. ಯುವಕನ ಸುಳಿವನ್ನು ಪತ್ತೆಹಚ್ಚಬೇಕು, ಇಲ್ಲದಿದ್ದರೆ ಮುಂದಿನ ದಿನದಲ್ಲಿ ಇಡೀ ರಾಜ್ಯವ್ಯಾಪಿ ನಾವು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಪೊಲೀಸರಿಗೆ ಬೆದರಿಸಿದ್ದರು ಶಾಸಕ ಹರೀಶ್ ಪೂಂಜಾ.
►ಟೆರರಿಸ್ಟ್ ಗಳು ಇದ್ದಾರೆ ಎಂದಿದ್ದ ಸಂಘ ಪರಿವಾರದ ಕಾರ್ಯಕರ್ತರು:
ಪೊಲೀಸ್ ನವರು ನಮ್ಮಲ್ಲಿ ಮಾತನಾಡುವಾಗ ಎಲ್ಲ ವಿಚಾರ ಹೇಳುತ್ತಾರೆ. ಆದರೆ ಅವರು ಇವತ್ತಿಗೂ ಕೂಡ ಅಲ್ಲಿ ಗಾಂಜಾದವರಿದ್ದಾರೆ, ಅಲ್ಲಿ ಟೆರರಿಸ್ಟ್ ಗಳಿದ್ದಾರೆ ಎಂಬುದರ ಕುರಿತು ಮಾತನಾಡುವುದಿಲ್ಲ. ನಮಗೆ ಸಹಿಸಿ ಸಹಿಸಿ ಸಾಕಾಗಿದೆ ನಾವು ಹಿಂದೂಗಳು ಮಲಗಿದ್ದೇವೆ ನಾವು ಸಾಯಲಿಲ್ಲ ಅದಕ್ಕೆ ಇವತ್ತು ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ ಎಂದು ಸಂಘ ಪರಿವಾರದ ಭರತ್ ಕುಮ್ಡೇಲ್ ಹೇಳಿದ್ದ.
ಈಗ ದಿಗಂತ್ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ಪರೀಕ್ಷೆ ಕಾರಣಕ್ಕೆ ಹೆದರಿ ಓಡಿ ಹೋದೆ ಎಂದು ಹೇಳುತ್ತಿದ್ದಾನೆ. ಅದು ನಿಜವೇ ಅಥವಾ ಬೇರೇನಾದರೂ ಕಾರಣ ಇದೆಯೇ ಎಂಬುದು ತನಿಖೆಯ ಬಳಿಕ ಹೊರಬರಬೇಕು. ಯಾವುದಕ್ಕೂ ಆತನೇ ಹೋಗಿದ್ದಾನೆ, ಬೇರೆ ಯಾರೂ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.ಅಲ್ಲಿಗೆ ಫರಂಗಿಪೇಟೆ ಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಷಡ್ಯಂತ್ರ ವೊಂದು ಬೋರಲು ಬಿದ್ದಿದೆ.
ಯಾವುದೇ ಆಧಾರವಿಲ್ಲದೆ, ಕೇವಲ ಮುಸ್ಲಿಂ ದ್ವೇಷ ದಿಂದಲೇ ಪ್ರತಿಯೊಂದು ಘಟನೆಯನ್ನು ನೋಡುವ, ಅದನ್ನು ಕೋಮುವಾದಿ ದೃಷ್ಟಿಯಲ್ಲಿ ಚಿತ್ರಿಸುವ ತೀರಾ ಸಂಘದ ಕೊಳಕು ಮನಸ್ಥಿತಿ ಫರಂಗಿಪೇಟೆ ಯಲ್ಲಿ ಬಯಲಾಗಿದೆ.
ಅವನು ನಮ್ಮ ಊರಿನ ಹುಡುಗ, ಸುರಕ್ಷಿತವಾಗಿ ಬರಬೇಕು ಎಂದು ರಾತ್ರಿಯಿಡೀ ಹುಡುಕಾಟ ನಡೆಸಿದ್ದ ಅಲ್ಲಿನ ಮಸೀದಿ ಜಮಾತ್ ಸಮಿತಿ ಹಾಗೂ ಅಲ್ಲಿನ ಎಲ್ಲ ಮುಸ್ಲಿಮರ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ.







