ರಾಜ್ಯಾದ್ಯಂತ ಡಿಜಿಟಲ್ ಇ-ಛಾಪಾ ಕಾಗದ ವ್ಯವಸ್ಥೆ ಪರಿಚಯ : ಕಂದಾಯ ಸಚಿವ ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ
ಬೆಂಗಳೂರು : ರಾಜ್ಯವು ಈಗ ಸಂಪೂರ್ಣ ಡಿಜಿಟಲ್ ನೋಂದಣಿ ವ್ಯವಸ್ಥೆಯತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಕೊರತೆಯನ್ನು ಸಂಪೂರ್ಣ ತೊಡೆದು ಹಾಕುವ ನಿಟ್ಟಿನಲ್ಲಿ ಡಿಜಿಟಲ್ ಇ-ಛಾಪಾ ಕಾಗದ(ಇ-ಸ್ಟ್ಯಾಂಪ್) ವ್ಯವಸ್ಥೆಯನ್ನು ಸರಕಾರ ಪರಿಚಯಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದಕ್ಕೆ ಸಂಬಂಧಪಟ್ಟ ಅಗತ್ಯವಾದ ನಿಯಮಾವಳಿಗಳನ್ನು ಪ್ರಕಟಿಸಿದ್ದು, ಸಾಫ್ಟ್ ಲಾಂಚ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನು ಮುಂದೆ ರಾಜ್ಯಾದ್ಯಂತ ಡಿಜಿಟಲ್ ಇ-ಛಾಪಾ ಕಾಗದ ಕಡ್ಡಾಯವಾಗಲಿದೆ ಎಂದು ಹೇಳಿದರು.
ನಾಗರಿಕರಿಗೆ ಆಗುವ ಪ್ರಯೋಜನಗಳು:
ನಾಗರಿಕರು ಯಾವುದೆ ಮಧ್ಯವರ್ತಿಗಳ ನೆರವಿಲ್ಲದೆ ಸ್ವತಃ ಡಿಜಿಟಲ್ ಇ-ಛಾಪಾ ಕಾಗದ ತಯಾರಿಸಿಕೊಳ್ಳಬಹುದು. ಈ ಸೇವೆ 24/7 ಮತ್ತು ಜಗತ್ತಿನೆಲ್ಲೆಡೆಯಿಂದ, ಇಂಟರ್ನೆಟ್ ಇದ್ದರೆ ಲಭ್ಯವಾಗಲಿದೆ.
ಪೂರ್ಣ ಆನ್ಲೈನ್ ಮತ್ತು ಸುರಕ್ಷಿತ: ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿದ್ದು, ಸುರಕ್ಷಿತವಾಗಿ ಮತ್ತು ವೇಗವಾಗಿ ಆನ್ಲೈನ್ ಪಾವತಿ ಮಾಡಲು ಅವಕಾಶವಿದೆ. ಪಾವತಿ ವ್ಯವಸ್ಥೆ ಕೂಡ 24/7 ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ದಸ್ತಾವೇಜಿನ ಭಾಗವೇ ಆಗುವ ಸ್ಟಾಂಪ್ ವಿಷಯ: ಸ್ಯಾಂಪ್ ವಿಷಯವು ದಸ್ತಾವೇಜಿನ ಅವಿಭಾಜ್ಯ ಭಾಗವಾಗುತ್ತದೆ. ಇದರಿಂದ ದುರುಪಯೋಗ, ಬದಲಾವಣೆ ಸಾಧ್ಯವಾಗುವುದಿಲ್ಲ.
ಡಿಜಿಟಲ್ ಸಹಿ: ನಾಗರಿಕರು ಆಧಾರ್ ಆಧಾರಿತ ಇ-ಸಹಿ ಅಥವಾ ಡಿಎಸ್ಸಿ ಬಳಸಿ ದಸ್ತಾವೇಜುಗಳಿಗೆ ಡಿಜಿಟಲ್ ಸಹಿ ಮಾಡಬಹುದು.
ಎಲ್ಲ್ಲ ಸಮಯದಲ್ಲೂ ಲಭ್ಯ: ವ್ಯವಸ್ಥೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಎಲ್ಲ ಸಮಯದಲ್ಲೂ ಲಭ್ಯವಿರಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಕಲು, ವಂಚನೆ ತಡೆಯಬಹುದು, ಡಿಜಿಟಲ್ ಸ್ಟ್ಯಾಂಪ್ ವಿವರಗಳು ಸ್ವಯಂಚಾಲಿತವಾಗಿ ನೋಂದಣಿ ವ್ಯವಸ್ಥೆಗೆ ಸೇರುತ್ತವೆ. ಮುಂದಿನ ದಿನಗಳಲ್ಲಿ ಪರಿಚಯಿಸಲಾಗುವ ಕಾಗದ ರಹಿತ ನೋಂದಣಿಯನ್ನು ಇದು ಬೆಂಬಲಿಸುತ್ತದೆ. ಸ್ಟ್ಯಾಂಪ್ ತಪ್ಪು ವರ್ಗೀಕರಣ ಮುಂತಾದವು ಸಂಪೂರ್ಣ ತಡೆಗಟ್ಟಲ್ಪಡುತ್ತವೆ. ಇದರಿಂದ ಸ್ಟ್ಯಾಂಪ್ ಶುಲ್ಕ ವಂಚನೆ, ನಕಲಿ ಸಹಿಗಳು ಸಂಪೂರ್ಣವಾಗಿ ತಡಹಿಡಿಯಲ್ಪಡುತ್ತದೆ ಎಂದು ಅವರು ನುಡಿದರು.
ತಪ್ಪು ವರ್ಗೀಕರಣ ಹಾಗೂ ವಂಚನೆಗಳ ನಿವಾರಣೆಯಿಂದ ಇಲಾಖೆ ಗಮನಾರ್ಹವಾಗಿ ಹೆಚ್ಚು ಆದಾಯ ಗಳಿಸುತ್ತದೆ. ಸರಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಡಿಜಿಟಲ್ ಇ-ಸ್ಟಾಂಪ್ ಪಡೆಯುವುದು ಹೇಗೆ?: ಪೋಟರ್ಲ್ನಲ್ಲಿ ನೋಂದಣಿ : https://kaverikarnataka.gov.in/landing-page 1 ನೀಡಿ. ಒಂದೇ ಬಾರಿ ನೋಂದಣಿ ಮಾಡಿ ಖಾತೆಯನ್ನು ಸೃಷ್ಟಿಸಿ. ಲಾಗಿನ್ ಆದ ನಂತರ ಬೇಕಾದ ದಸ್ತಾವೇಜಿನ ಪ್ರಕಾರವನ್ನು (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್. ಮಾರಾಟ ಒಪ್ಪಂದ) ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ. ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ ಆಧಾರ್ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಬೇಕು ಎಂದು ಅವರು ನುಡಿದರು.
ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ, ಸಿಸ್ಟಂ ಸರಕಾರಿ ಡೇಟಾಬೇಸ್ಗಳಿಂದ ಆಸ್ತಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ನಿಮ್ಮ ಸ್ವಂತ ವಿಷಯವನ್ನು ಸೇರಿಸಿ ದಸ್ತಾವೇಜನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ತಯಾರಿಸಿ. ಸ್ಟ್ಯಾಂಪ್ ಶುಲ್ಕ, ಲೆಕ್ಕ ಹಾಕಿದ ನಂತರ, ಖಜಾನೆ ಪಾವತಿ ಗೇಟ್ವೇ ಮೂಲಕ ಪಾವತಿ ಮಾಡಿ. ಪಾವತಿ ದೃಢಪಟ್ಟ ನಂತರ, ಸಿಸ್ಟಂ ‘De’ ಅನ್ನು ರಚಿಸುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇದರಲ್ಲಿ ಯೂನಿಕ್ ಸೀರಿಯಲ್ ನಂಬರ್, ಕ್ಯೂಆರ್ ಕೋಡ್, ಡಿಜಿಟಲ್ ವಾಟರ್ ಮಾರ್ಕ್ ಇವೆಲ್ಲವೂ ಸೇರಿದ್ದು ದಸ್ತಾವೇಜನ್ನು ಅತ್ಯಂತ ಭದ್ರವಾಗಿಸುತ್ತವೆ. ಎಲ್ಲ ಸಹಿ ಪಡಿಸುವವರಿಗೆ ಅವರ ಮೊಬೈಲ್ಗೆ ಲಿಂಕ್ ಬರುತ್ತದೆ. ಅದರಲ್ಲಿ ಆಧಾರ್ ಇ-ಸಹಿ ಅಥವಾ ಡಿಎಸ್ಸಿ ಮೂಲಕ ಸಹಿ ಮಾಡಬಹುದು. ಎಲ್ಲರೂ ಸಹಿ ಮಾಡಿದ ನಂತರ ನಿಮ್ಮ ಅಂತಿಮ ಸ್ಟ್ಯಾಂಪ್ ಮಾಡಲ್ಪಟ್ಟ ಹಾಗೂ ಸಹಿ ಮಾಡಲ್ಪಟ್ಟ ದಸ್ತಾವೇಜು ಕಾನೂನಿನಂತೆ ಮಾನ್ಯವಾಗುತ್ತದೆ. ಇದನ್ನು ಡೌನ್ಲೋಡ್ ಮಾಡಬಹುದು ಹಾಗೂ ನೋಂದಣಿಗೆ ಬಳಸಬಹುದು ಎಂದು ಕೃಷ್ಣ ಬೈರೇಗೌಡ ವಿವರಿಸಿದರು.







