"ಸ್ಪೋಟಕ ಮಾಹಿತಿ ಇದೆ" : ಮಂಜುನಾಥ್ ಭಂಡಾರಿಗೆ ದಿನೇಶ್ ಅಮಿನ್ ಮಟ್ಟು ಸವಾಲು

Photo credit: facebook/Dinesh Amin
ಬೆಂಗಳೂರು: ಕಾಂಗ್ರೆಸ್ ಒಳಗಿನ ಮೃದು ಹಿಂದುತ್ವವಾದಿಗಳ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಹೇಳಿಕೆ ಈಗ ಪಕ್ಷದೊಳಗೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ. ಅಮಿನ್ ಮಟ್ಟು ತಮ್ಮ ವಿರುದ್ಧವೇ ಆರೋಪ ಮಾಡಿದ್ದು ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಮಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದರು.
ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್ ಕಾರ್ಯಕ್ರಮ ನಡೆದೇ ಇಲ್ಲ, ಇನ್ನು ಮುಂದೆ ಇಂತಹ ಆರೋಪ ಮಾಡಿದ್ರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಹೇಳಿದ್ದರು. ಜೊತೆಗೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಬರೆದವರು ಬಂದು ಕಾಂಗ್ರೆಸ್ ಟಿಕೆಟ್ ಕೇಳಿದ್ದೇಕೆ ಎಂದೂ ಮಟ್ಟು ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಈಗ ಭಂಡಾರಿ ಅವರಿಗೆ ಅಮಿನ್ ಮಟ್ಟು ಬಹಿರಂಗ ಪತ್ರ ಬರೆದು ತಿರುಗೇಟು ನೀಡಿದ್ದಾರೆ. ಜೊತೆಗೆ ಸವಾಲು ಹಾಕಿದ್ದಾರೆ.
"ಸಹ್ಯಾದ್ರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಆರೆಸ್ಸೆಸ್ನ ಯಾವುದೇ ಚಟುವಟಿಕೆ ನಡೆದಿಲ್ಲ" ಎಂಬ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು, ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಎಬಿವಿಪಿ ಕಾರ್ಯಕ್ರಮದ ಫೋಟೊವನ್ನು ಬಿಡುಗಡೆ ಮಾಡಿದ್ದಾರೆ.
ಈ ಸಂಬಂಧ ಸೋಮವಾರ ಮಂಜುನಾಥ್ ಭಂಡಾರಿ ಅವರಿಗೆ ಬರೆದ ಬಹಿರಂಗ ಪತ್ರವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಅವರು, "ಕಳೆದ ಶನಿವಾರ ಮಂಗಳೂರಿನಲ್ಲಿ ನೀವು ನಡೆಸಿದ ಪತ್ರಿಕಾಗೋಷ್ಠಿಯನ್ನು ನೋಡಿದೆ. ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂದು ಹೇಳಿದ ಒಂದು ವಾರದ ನಂತರವಾದರೂ ಇಂತಹದ್ದೊಂದು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಅಭಿನಂದನೆಗಳು. ಆ ಪತ್ರಿಕಾಗೋಷ್ಠಿಯಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸದೆ ನಾನು ಇತ್ತೀಚೆಗೆ ಕೆಲವು ವಿಡಿಯೋಗಳಲ್ಲಿ ಮಾತನಾಡಿರುವ ವಿಷಯದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದೀರಿ. ಅದನ್ನು ನನ್ನನ್ನು ಉದ್ದೇಶಿಸಿ ಹೇಳಿದ್ದಲ್ಲ ಎಂದು ತಿಳಿಸಿದರೆ ಈ ಪತ್ರವನ್ನು ವಿಷಾದ ವ್ಯಕ್ತಪಡಿಸಿ ಹಿಂದೆಗೆದುಕೊಳ್ಳುತ್ತೇನೆ. ಅದು ನನ್ನನ್ನು ಉದ್ದೇಶಿಸಿ ಹೇಳಿದ್ದರೆ ನೀವು ಪ್ರತಿಕ್ರಿಯಿಸಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
(ಮಂಜುನಾಥ್ ಭಂಡಾರಿ /ದಿನೇಶ್ ಅಮಿನ್ ಮಟ್ಟು)
"ನಿಮ್ಮ ಒಡೆತನದ ಸಹ್ಯಾದ್ರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಯಾವುದೇ ಆರೆಸ್ಸೆಸ್ ಚಟುವಟಿಕೆ ನಡೆದಿಲ್ಲ, ಅಲ್ಲಿ ನಡೆದಿರುವುದು ‘’ಸೃಷ್ಟಿ’’ ಕಾರ್ಯಕ್ರಮ, ಅದು ಎಬಿವಿಪಿ ಕಾರ್ಯಕ್ರಮ ಅಲ್ಲ, ಅದರಲ್ಲಿ ಅವರು ಭಾಗವಹಿಸಿದ್ದಾರೆ ಅಷ್ಟೆ’’ ಎಂದು ಆಯ್ದ ಪೋಟೊಗಳ ಸಹಿತ ಸ್ಪಷ್ಟೀಕರಣ ನೀಡಿದ್ದೀರಿ. ಆದರೆ, ನೀವು ಸುಳ್ಳು ಹೇಳಿದ್ದೀರಿ. ಈ ಪತ್ರದ ಜೊತೆ ಕೆಲವು ಪೋಟೊಗಳನ್ನು ಲಗತ್ತಿಸಿರುವೆ. ಅದನ್ನು ದಯವಿಟ್ಟು ನೋಡಿ. ‘’ಸೃಷ್ಟಿ’’ ಎನ್ನುವುದು ಎಬಿವಿಪಿಯವರೇ ಆಯೋಜಿಸಿರುವ ಕಾರ್ಯಕ್ರಮ. ಸಚಿವ ಪ್ರಿಯಾಂಕ್ ಖರ್ಗೆಯವರು ನಿರ್ಬಂಧಿಸಬೇಕೆಂದು ಹೇಳಿರುವುದು ಇಂತಹದ್ದೇ ಕಾರ್ಯಕ್ರಮಗಳನ್ನು, ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಿ. ನಾನು ಮತ್ತೆ ಈ ಆರೋಪವನ್ನು ಪುನುರಚ್ಚರಿಸುತ್ತೇನೆ, ನಿಮ್ಮ ಮಾನನಷ್ಟ ಮೊಕದ್ದಮೆಯನ್ನು ಸ್ವಾಗತಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಎರಡನೆ ವಿಷಯ ಸ್ವಲ್ಪ ವೈಯಕ್ತಿಕವಾದುದು. ಇಲ್ಲಿಯೂ ನನ್ನ ಹೆಸರನ್ನು ಪ್ರಸ್ತಾಪಿಸದೆ "ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾಗಾಂಧಿ ವಿರುದ್ದ ಬರೆದವರಿಗೆ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಗೆ ಟಿಕೆಟ್ ಕೇಳುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದೀರಿ. ನನ್ನ ಪಾಲಿನ 'ಖಳನಾಯಕರು' ಯಾರು ಎಂದು ಹುಡುಕುತ್ತಿದ್ದೆ, ನೀವಾಗಿಯೇ ಕೈ ಎತ್ತಿದ್ದಕ್ಕೆ ಧನ್ಯವಾದ. ಆದರೆ ಇದು ಸಾಹಿತ್ಯ, ಮಾಧ್ಯಮ, ಸಂಗೀತ, ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ವಿಧಾನಪರಿಷತ್ ಗೆ ಕಳಿಸುವ ನಾಮನಿರ್ದೇಶನ. ಟಿಕೆಟ್ ತೆಗೆದುಕೊಂಡು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಚುನಾವಣೆ ಅಲ್ಲ. ಸಂವಿಧಾನದ 172ನೇ ವಿಧಿಯನ್ನು ಒಮ್ಮೆ ಓದಿ" ಎಂದು ಅವರು ಉಲ್ಲೀಖಿಸಿದ್ದಾರೆ.
"ಈ ಆರೋಪದಲ್ಲಿ ನೀವು ಕಾಂಗ್ರೆಸ್ ಪಕ್ಷದ ಮೂವರು ನಾಯಕರ ಹೆಸರು ಪ್ರಸ್ತಾಪಿಸಿದ್ದೀರಿ. ಈ ಮೂವರ ಬಗ್ಗೆ ನಾನು ಮಾನಹಾನಿಕರವಾದುದನ್ನು ಬರೆದಿದ್ದರೆ ದಯವಿಟ್ಟು ಇದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ, ನಾನೂ ಹುಡುಕುತ್ತಿದ್ದೇನೆ. ಅದೇ ರೀತಿ ಕಳೆದ ಚುನಾವಣೆಯ ಕಾಲದಲ್ಲಿ ನೀವೇ ಕರೆತಂದು ನಿಮ್ಮ ಪಕ್ಷಕ್ಕೆ ಸೇರಿಸಿ ಚುನಾವಣಾ ಕಣಕ್ಕಿಳಿಸಿದ್ದ ಕಟ್ಟರ್ ಬಿಜೆಪಿ ನಾಯಕರ ಹೇಳಿಕೆಗಳನ್ನೂ ಬಿಡುಗಡೆಗೊಳಿಸಿ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ದ ನಾನೇ ಮಾನನಷ್ಟ ಮೊಕದ್ದಮೆ ಯಾಕೆ ಹೂಡಬಾರದು ಎಂದು ಯೋಚಿಸುತ್ತಿದ್ದೇನೆ" ಎಂದು ತಿರುಗೇಟು ನೀಡಿದ್ದಾರೆ.
"ಕರಾವಳಿಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ತತ್ವಬದ್ದ ನಾಯಕರು ಮತ್ತು ಕಾರ್ಯಕರ್ತರ ಪ್ರೀತಿಪೂರ್ವಕ ಒತ್ತಾಯ-ಒತ್ತಡ ಇಲ್ಲದೆ ಇದ್ದಿದ್ದರೆ ಈ ಪತ್ರವನ್ನು ಬರೆಯುತ್ತಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಅಕ್ಕಪಕ್ಕ ಕೂತವರನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ನಿಮ್ಮ ಪಕ್ಷದ ಹೆಚ್ಚಿನ ನಾಯಕರು ನನ್ನನ್ನು ಅಭಿನಂದಿಸಿರುವುದು ಮಾತ್ರವಲ್ಲ ಇನ್ನಷ್ಟು ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ, ನೀವು ಬಯಸಿದರೆ ನಮ್ಮ ಚರ್ಚೆಯನ್ನು ಮುಂದುವರಿಸೋಣ" ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಮಂಜುನಾಥ್ ಭಂಡಾರಿ ಅವರು ಅಯೋಧ್ಯೆಯ ನೂತನ ರಾಮಮಂದಿರದ ಹೊರಗೆ ಆಗಿನ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮತ್ತಿತರರ ಜೊತೆ ನಿಂತಿರುವ ಫೋಟೋವನ್ನೂ ಮಟ್ಟು ಫೇಸ್ ಬುಕ್ ಪೋಸ್ಟ್ ನಲ್ಲಿ ಹಾಕಿದ್ದಾರೆ.
ಮಂಜುನಾಥ ಭಂಡಾರಿ ಹೇಳಿದ್ದೇನು?
ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಅನುಮತಿ ನೀಡಲಾಗಿದೆ, ಬೈಠಕ್ ನಡೆಸಲಾಗಿದೆ ಎಂಬ ಆರೋಪಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ ಮಂಜುನಾಥ ಭಂಡಾರಿ, ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್ನ ಯಾವುದೇ ಚಟುವಟಿಕೆ ನಡೆದಿಲ್ಲ. ಸರಕಾರದ ಕೈಗಾರಿಕಾ ಸಂಸ್ಥೆಯ ಮೂಲಕ ರಾಜ್ಯದ ಸುಮಾರು 300 ಕಾಲೇಜುಗಳ ವಿದ್ಯಾರ್ಥಿಗಳ ಭಾಗವಹಿಸಿದ್ದ ‘ಸೃಷ್ಟಿ’ ಎಂಬ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿತ್ತು. ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಕಾರ್ಯಕ್ರಮ ಆದಾಗಿದ್ದು, ಸರಕಾರದ ಹಿರಿಯ ಅಧಿಕಾರಿಗಳು, ವಿವಿಧ ಐಟಿ ಕಂಪನಿಗಳವರು ಅದರಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ಬೆಂಬಲ ನೀಡಿತ್ತು. ಅದು ವಿದ್ಯಾರ್ಥಿಗಳ ಪ್ರಾಜೆಕ್ಟ್ ಆಧಾರಿತ ಕಾರ್ಯಕ್ರಮ ಎಂಬ ನೆಲೆಯಲ್ಲಿ ಅವಕಾಶ ನೀಡಲಾಗಿತ್ತೇ ಹೊರತು ಅಲ್ಲಿ ಯಾವುದೇ ಆರೆಸ್ಸೆಸ್ ಚಟುವಟಿಕೆ ಅಥವಾ ಬೈಠಕ್ ನಡೆಸಲಾಗಿಲ್ಲ ಎಂದು ಹೇಳಿದ್ದರು.







