ಇನ್ನೂ ಹೆಚ್ಚಿನ ಜನರನ್ನು ಕೊಲೆ ಮಾಡುವ ಆಲೋಚನೆ ಮಾಡಿದ್ರು : ದಿನೇಶ್ ಗುಂಡೂರಾವ್
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನ"

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಲು ದೇಶ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಇವರಿಗೆ ಕಾನೂನಿನ ಯಾವುದೇ ಭಯವಿಲ್ಲ, ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಬಿಂಬಿಸಲು ಮುಂದಾಗಿರುವುದು ಆತಂಕಕಾರಿಯಾದದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಗುರುವಾರ ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ದುಲ್ ರಹ್ಮಾನ್ ಕೊಲೆ ನಂತರದ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಗಳೂರಿನಲ್ಲಿ ಮೊನ್ನೆ ಆದಂತಹ ಕೆಟ್ಟ ಘಟನೆಯಿಂದ ನಮ್ಮ ಮನಸ್ಸುಗಳಿಗೆ ತುಂಬಾ ಬೇಸರ, ನೋವು ಆಗಿದೆ. ನಾನು ನಿನ್ನೆ ತೀರ್ಥಹಳ್ಳಿಯಲ್ಲಿದ್ದೆ. ಇಂದು ಗೃಹ ಸಚಿವರ ಜೊತೆ ಜಿಲ್ಲೆಯಲ್ಲಿ ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ಮಾಡಿದ್ದೇನೆ. ಈ ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ನಮಗೆ ಸಿಕ್ಕ ಮಾಹಿತಿ ಪ್ರಕಾರ ಇನ್ನು ಹೆಚ್ಚು ಜನರನ್ನು ಕೊಲ್ಲುವುದು ಈ ಯೋಜನೆಯ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಜೊತೆಯೂ ಚರ್ಚೆ ಮಾಡಿ, ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ದೇಶ ವಿರೋಧಿ ಶಕ್ತಿಗಳು ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಿ, ಮುಸ್ಲಿಮರನ್ನು ಗುರಿ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಕರ್ನಲ್ ಸೋಫಿಯಾ ಖುರೇಶಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಬಗ್ಗೆ ಬಿಜೆಪಿಯವರು ಬಳಸಿದ ಪದಗಳೇ ಅವರ ಉಗ್ರಗಾಮಿ ಮನಸ್ಥಿತಿಯನ್ನು ತೋರಿಸುತ್ತದೆ. ಮುಸ್ಲಿಮರು ಎಂದರೆ ಪಾಕಿಸ್ತಾನಿಗಳು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ದೇಶ ಎಲ್ಲರಿಗೂ ಸೇರಿದ್ದು ಎಂದು ಸಂವಿಧಾನ ಹೇಳಿದೆ. ಅದರ ಮೇಲೆ ಅವರಿಗೆ ನಂಬಿಕೆಯಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇಂತಹ ಮನಸ್ಥಿತಿ ಯುವಕರ ಮನಸ್ಸನ್ನು ಕೆಡಿಸಿದೆ. ಹಿಂಸಾತ್ಮಕ ಬೆಳವಣಿಗೆಗಳಿಗೆ ಇದು ಕಾರಣವಾಗುತ್ತಿದೆ. ದುಷ್ಕರ್ಮಿಗಳಿಗೆ ಮಾನವೀಯತೆ ಇಲ್ಲ. ಯಾವ ಧರ್ಮ ಇಂತಹ ಕೆಲಸಗಳನ್ನು ಮಾಡಲು ಹೇಳುತ್ತದೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸಲು, ತಪ್ಪಿತಸ್ಥರನ್ನು ಶಿಕ್ಷಿಸಲು ಮತ್ತು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯಾರೇ ಆಗಿರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮ್ಮ ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೊಲೆಯಾದ ವ್ಯಕ್ತಿಯು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಲಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.







