ಹೃದಯಾಘಾತಕ್ಕೆ ಲಸಿಕೆಯಲ್ಲ, ಕೋವಿಡ್ ಸೋಂಕು ಕಾರಣ ಇರಬಹುದು: ದಿನೇಶ್ ಗುಂಡೂರಾವ್
ಸರಕಾರಕ್ಕೆ ತಜ್ಞರ ಸಮಿತಿ ವರದಿ ಸಲ್ಲಿಕೆ

ದಿನೇಶ್ ಗುಂಡೂರಾವ್
ಬೆಂಗಳೂರು : ಹೃದಯಾಘಾತಕ್ಕೆ ಕೋವಿಡ್ ಸೋಂಕು ಕೂಡ ಕಾರಣವಾಗಿರುಬಹುದೇ ಹೊರತು, ಲಸಿಕೆಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ವರದಿಯನ್ನು ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ ಎಂಬುದು ವರದಿಯಲ್ಲಿ ಗೊತ್ತಾಗಿದೆ ಎಂದು ಉಲ್ಲೇಖಿಸಿದರು.
ಕೋವಿಡ್ ಸೋಂಕಿನ ಬಳಿಕ ಮಧುಮೇಹ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವುದು ಹೃದಯಾಘಾತಕ್ಕೆ ಒಂದು ಕಾರಣ ಎಂದು ಸಮಿತಿ ತಿಳಿಸಿದೆ. ಅದೇ ರೀತಿ, ಬಿಪಿ (ರಕ್ತದೊತ್ತಡ) ಹೆಚ್ಚಳ, ಕೋವಿಡ್ ಸೋಂಕಿನಿಂದ ದೇಹದ ಮೇಲಾಗುವ ಪರಿಣಾಮಗಳು, ಇತರೆ ಔಷಧಿಗಳ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ಟಿವಿ ಮತ್ತು ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಕೂಡ ಹೃದಯಾಘಾತಕ್ಕೆ ಕಾರಣಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಮುಖವಾಗಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳು ಮತ್ತು ಕೋವಿಡ್ನಿಂದಾಗುವ ದುಷ್ಪರಿಣಾಮಗಳ ಕುರಿತು ಸರಕಾರದ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಅದರಂತೆ ಡಾ.ರವೀಂದ್ರನಾಥ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಕೋವಿಡ್ ನಂತರ ಸ್ವಲ್ಪ ಮಟ್ಟಿಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವುದನ್ನು ದೃಢಪಡಿಸಿದೆ. ಆದರೆ, ಇದು ಲಸಿಕೆಯಿಂದಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯೂ ಹೃದಯಾಘಾತಕ್ಕೆ ಒಂದು ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದ ವರದಿಗಳು ಸಹ ಈ ಅಂಶಗಳನ್ನು ಬೆಂಬಲಿಸುತ್ತವೆ ಎಂದ ಅವರು, ಹಠಾತ್ ಮರಣಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು







