ರಾಜ್ಯಾದ್ಯಂತ 40 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಗುಣಮಟ್ಟವಲ್ಲದ ಔಷಧ ಜಪ್ತಿ : ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು: ಜುಲೈ ತಿಂಗಳಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯಾದ್ಯಂತ ಒಂದು ಸಾವಿರಕ್ಕೂ ಅಧಿಕ ಔಷಧಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಗುಣಮಟ್ಟವಲ್ಲದ ಸುಮಾರು 40 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಔಷಧಗಳನ್ನು ಜಪ್ತಿ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿರುವ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾರಾಟ ಮಾಡುತ್ತಿರುವ 1,433 ಔಷಧ ಮಾದರಿಗಳನ್ನು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿಯಲ್ಲಿರುವ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಲಾಗಿದೆ. 1,366 ಉತ್ತಮ ಗುಣಮಟ್ಟದೆಂದು, 67 ಔಷಧ ಮಾದರಿಗಳು ಗುಣಮಟ್ಟವಲ್ಲದ ಔಷಧಗಳು ಎಂದು ಘೋಷಿಸಲಾಗಿದೆ ಎಂದರು.
ಹಿಂದೆ ಗುಣಮಟ್ಟವಲ್ಲದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು 30 ದಿನಗಳ ಕಾಲವಕಾಶ ನೀಡಲಾಗಿತ್ತು. ಆದರೆ ಈಗ ಎರಡು ದಿನಗಳ ಅವಧಿಗೆ ಇಳಿಕೆ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಸುಮಾರು 40,48,436 ರೂ.ಗಳ ಮೌಲ್ಯದ ಗುಣಮಟ್ಟವಲ್ಲದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಜೂನ್ 24 ಮತ್ತು 25ರಂದು ಔಷಧ ಆಡಳಿತದ ಅಮಲು ಜಾರಿ ಅಧಿಕಾರಿಗಳು ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟಲು 279 ವಿಶೇಷ ಪರಿವೀಕ್ಷಣೆಯನ್ನು ಕೈಗೊಂಡು, ಉಲ್ಲಂಘನೆ ಕಂಡು ಬಂದ 231 ಪ್ರಕರಣಗಳಲ್ಲಿ ಶೋಕಾಸ್ ನೋಟೀಸ್ ನೀಡಿದ್ದಾರೆ. ಹಾಗೆಯೇ 15 ಔಷಧ ಮಳಿಗೆಗಳಿಗೆ ಆಜ್ಞಾಪಾಲನೆ(ಕಂಪ್ಲೈನ್ಸ್) ಪತ್ರವನ್ನು ನೀಡಿದ್ದಾರೆ. ಇನ್ನು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಉಲ್ಲಂಘನೆ ಮಾಡಿದ 29 ಸಂಸ್ಥೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜುಲೈ ತಿಂಗಳಲ್ಲಿ 3,489 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಿದ್ದು, ಅವುಗಳಲ್ಲಿ 17 ಅಸುರಕ್ಷಿತ ಮಾದರಿಗಳಾಗಿದ್ದು, 18 ಕೆಳದರ್ಜೆಯ ಮಾದರಿಗಳಾಗಿವೆ. ಬೆಂಗಳೂರು ನಗರದ ಎಂಪೈರ್ ಹೋಟೆಲ್ಗಳಲ್ಲಿ 6 ಕಬಾಬ್ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿದ್ದು, ಎಲ್ಲ ಮಾದರಿಗಳೂ ಕೃತಕ ಬಣ್ಣಗಳನ್ನು ಹೊಂದಿದ್ದರಿಂದ ಅಸುರಕ್ಷಿತ ಎಂದು ವರದಿಯಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಉದ್ದಿಮೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯಾದ್ಯಂತ 1,557 ಬೀದಿ ಬದಿ ವ್ಯಾಪಾರ ಘಟಕಗಳಿಗೆ ಭೇಟಿ ನೀಡಿದ್ದು, ಲೋಪಗಳು ಕಂಡು ಬಂದಿರುವ 406 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿರುತ್ತದೆ. ಸ್ಥಳದಲ್ಲೇ 44,500 ರೂ.ಗಳ ದಂಡವನ್ನು ವಿಧಿಸಲಾಗಿದೆ. 1,240 ಬೀದಿ ಬದಿ ಆಹಾರ ವ್ಯಾಪಾರಿಗಳಿಗೆ ನೈರ್ಮಲ್ಯತೆ ಮತ್ತು ಗುಣಮಟ್ಟದ ತರಬೇತಿಯನ್ನು ನೀಡಲಾಗಿದೆ. ಹಾಗೆಯೇ 866 ಬೀದಿ ಬದಿಯ ವ್ಯಾಪಾರ ಘಟಕಗಳಿಗೆ ಉಚಿತ ನೋಂದಣಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಇನ್ನು 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಲೋಪಗಳು ಕಂಡು ಬಂದಿರುವ 206 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಿದ್ದಾರೆ. ಸ್ಥಳದಲ್ಲೇ 55,000 ರೂ.ಗಳ ದಂಡವನ್ನು ವಿಧಿಸಲಾಗಿದೆ. 99 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.
ರಾಜ್ಯದ 736 ಹೋಟೆಲ್, ರೆಸ್ಟೋರೆಂಟ್ಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, ಲೋಪಗಳು ಕಂಡು ಬಂದಿರುವ 190 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 21,500 ರೂ.ಗಳ ದಂಡವನ್ನು ವಿಧಿಸಲಾಗಿದೆ. 291 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
175 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, 73 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದೆ. 4 ಮಾದರಿಗಳು ಕೆಳದರ್ಜೆ ಎಂದು, 69 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿದೆ. ಇನ್ನೂ ಹೆಚ್ಚಿನ ಹಾಲಿನ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಆಗಸ್ಟ್ ನಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಡುಗೆ ಎಣ್ಣೆ ತಯಾರಿಕಾ ಘಟಕಗಳ ಮಾಲಕರು/ಮುಖ್ಯಸ್ಥರು, ಮುಖ್ಯಸ್ಥರುಗಳು, ಆಯಿಲ್ ಫೆಡರೇಷನ್ ಆಫ್ ಕರ್ನಾಟಕದ ಪದಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಬಳಕೆ ಮಾಡಿದ ಎಣ್ಣೆಯನ್ನು ಸಂಗ್ರಹಿಸಿ, ಬಯೋಡೀಸೆಲ್ ತಯಾರಿಕಾ ಘಟಕಕ್ಕೆ ನೀಡುವಂತೆ ಮತ್ತು ಕಾಲಕಾಲಕ್ಕೆ ಎಣ್ಣೆಯ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಇಲಾಖೆಯಿಂದ ನೀಡುತ್ತಿರುವ ಆನ್ಲೈನ್ ಸೇವೆಗಳನ್ನು ಓಎನ್ಡಿಎಲ್ಎಸ್ ಪೋರ್ಟಲ್ಗೆ ವರ್ಗಾಹಿಸಿರುವುದರಿಂದ ರಕ್ತನಿಧಿ ಕೇಂದ್ರಗಳಿಗೆ ಆನ್ಲೈನ್ ಮೂಲಕವೇ ಪರವಾನಿಗೆಗಳನ್ನು ನೀಡಲಾಗುತ್ತಿದೆ. ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಗಳಲ್ಲಿ ಅಗತ್ಯ ಮಾದಕ ಔಷಧಗಳನ್ನು ಬಳಸಲು ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರಗಳನ್ನು ಆನ್ಲೈನ್ ಮೂಲಕವೇ ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಆಯುಷ್ ಇಲಾಖೆಯ ಆಯುರ್ವೇದ, ಸಿದ್ದ ಮತ್ತು ಯುನಾನಿ ಔಷಧಗಳ ಅಮಲು ಜಾರಿ ವಿಭಾಗ ಹಾಗೂ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಆಯುಷ್ ಔಷಧಗಳ ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ ಇಲಾಖೆಯ ಔಷಧ ನಿಯಂತ್ರಣ ವಿಭಾಗದ ಅಡಿಯಲ್ಲಿ ವಿಲೀನಗೊಳಿಸಲಾಗಿದೆ. ಇದರಿಂದ ಆರೋಗ್ಯ ಇಲಾಖೆಯಲ್ಲಿನ ಎಲ್ಲ ನಿಯಂತ್ರಣ ಕಾರ್ಯಗಳು ಸುಗಮವಾಗಿ ಕಾರ್ಯನಿರ್ವಹಿಸಲು ಆಹಾರ ಸುರಕ್ಷತೆ ಮತ್ತು ಔಷಧ ಆಯುಕ್ತರ ಆಡಳಿತ ವ್ಯಾಪ್ತಿಗೆ ತರಲಾಗಿದೆ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ರಾಜ್ಯದಲ್ಲಿ 603 ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, 545 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ವಿಶ್ಲೇಷಣಾ ಕಾರ್ಯವು ಪುಗತಿಯಲ್ಲಿರುತ್ತದೆ. ಅಲ್ಲದೆ ಒಟ್ಟು 1,263 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೊಂದಣಿ ಒದಗಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.







