ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳ ಖರೀದಿಗೆ 880ಕೋಟಿ ರೂ.ಅನುಮೋದನೆ : ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು : ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆ ಹಾಗೂ ಇತರ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ 890 ವಿಧಗಳ ಔಷಧಿಗಳನ್ನು 880.68 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಪರಿಷತ್ತಿನ ಪ್ರಶೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಡಾ.ಧನಂಜಯ ಸರ್ಜಿ ಹಾಗೂ ಪ್ರತಾಪ ಸಿಂಹ ನಾಯಕ್ ಕೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧಗಳನ್ನು ಖರೀದಿಸಲು ಕೆಎಸ್ಎಂಎಸ್ಸಿಎಲ್ ಸಂಸ್ಥೆಗೆ ಅನುಮೋದನೆ ನೀಡಲಾಗಿದೆ. ಔಷಧಿ ಖರೀದಿಯನ್ನು ಪಾರದರ್ಶಕವಾಗಿ ಟೆಂಡರ್ ಕರೆದು ಮಾಡಲಾಗುತ್ತಿದೆ. ಹೆಚ್ಚು ಗುತ್ತಿಗೆದಾರರು ಭಾಗವಹಿಸಲು ಅವಕಾಶವಾಗುವಂತೆ ಟೆಂಡರ್ ಷರತ್ತುಗಳನ್ನು ವಿಧಿಸಲಾಗಿದೆ ಎಂದರು.
ಔಷಧ ಸರಬರಾಜು ಮಾಡುವ ಮುನ್ನವೇ ಗುಣಮಟ್ಟದ ಪರೀಕ್ಷೆ ಮಾಡಲಾಗುವುದು. ಕೊರತೆ ಇರುವ ಔಷಧಗಳನ್ನು ತಾತ್ಕಾಲಿಕವಾಗಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ವಾರ್ಷಿಕ ಔಷಧಿ ಖರೀದಿ ಬದಲು 3 ರಿಂದ 4 ತಿಂಗಳಿಗೊಮ್ಮೆ ಅಗತ್ಯವಿರುವ ಔಷಧಿ ಖರೀದಿ ಮಾಡಲಾಗುತ್ತಿದೆ. ಇದರಿಂದ ಅವಧಿ ಮುಗಿಯುವ ಔಷಧಿಗಳ ಸಂಖ್ಯೆ ತಪ್ಪಲಿದೆ. 232 ಕೋಟಿ ರೂ.ಗಳಷ್ಟು ಔಷಧಿಗಳನ್ನು ಒದಗಿಸಲಾಗಿದೆ. ಈ ತಿಂಗಳು, ಮುಂದಿನ ತಿಂಗಳು ಸರಬರಾಜು ಆಗಲಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
2025-26ನೇ ಸಾಲಿನಲ್ಲಿ ಕೆಎಸ್ಎಂಎಸ್ಸಿಎಲ್ ಸಂಸ್ಥೆಯಿಂದ 534 ಔಷಧಿಗಳಲ್ಲಿ ಆದ್ಯತೆ ಮೇಲೆ 496 ಔಷಧಿಗಳ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಉಳಿದ 38 ಔಷಧಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ರಾಜ್ಯದ ಎಲ್ಲ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಎಬಿ-ಎಆರ್ಕೆ ಮೊದಲಾದ ಅನುದಾನಗಳನ್ನು ಜೀವ ರಕ್ಷಕ ಔಷಧಿ ಖರೀದಿಸಿ ರೋಗಿಗಳಿಗೆ ನೀಡಲು ನಿರ್ದೇಶನ ನೀಡಲಾಗಿದೆ. ಆರೋಗ್ಯ ಸಂಸ್ಥೆಗಳು ಅಗತ್ಯವಿರುವ ಔಷಧಿಗಳನ್ನು ಗವರ್ನಮೆಂಟ್-ಇ- ಮಾರ್ಕೆಟ್ ಪ್ಲೇಸ್ ಮೂಲಕ ನೇರ ಖರೀದಿಗೂ ಅವಕಾಶ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಗುಣಮಟ್ಟ ಖಾತರಿ ಪ್ರಕ್ರಿಯೆಯಿಂದ ವಿಳಂಬ: ತಮಿಳುನಾಡು ರಾಜ್ಯ ಬಹಳ ಅಚ್ಚುಕಟ್ಟಾದ ಖರೀದಿ ಪ್ರಕ್ರಿಯೆ ನಡೆಸುತ್ತದೆ. ನಮ್ಮ ಟೆಂಡರ್ಗಳಲ್ಲಿ ಅನವಶ್ಯಕ ಷರತ್ತುಗಳಿಂದ ಹೆಚ್ಚು ಬಿಡ್ದಾರರು ಬರುತ್ತಿರಲಿಲ್ಲ. ಯಾವ ಔಷಧ ಎಷ್ಟು ಅಗತ್ಯ ಇದೆ ಎಂದು ಪರಿಶೀಲನೆ ಮಾಡಿ, ಪಾರದರ್ಶಕ ವ್ಯವಸ್ಥೆ ಮುಖಾಂತರ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದೇವೆ. ಖರೀದಿಸಿದ ಔಷಧಗಳನ್ನು ಉಗ್ರಾಣದಲ್ಲಿಯೂ ಮತ್ತೊಮ್ಮೆ ಪರೀಕ್ಷೆ ನಡೆಸಿ, ಗುಣಮಟ್ಟ ಖಾತರಿ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದೇ ವೆ. ಇದರಿಂದ ಸ್ವಲ್ಪ ವಿಳಂಬ ಆಗಿದೆ. ಎಬಿಆರ್ಕೆ ಅಡಿಯಲ್ಲಿ ಎಲ್ಲ ಜಿಲ್ಲೆ ಗಳಲ್ಲಿ ಸುಮಾರು 300 ಕೋಟಿ ರೂ. ಹಣ ಇದ್ದು, ಹೆಚ್ಚುವರಿಯಾಗಿ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಸ್ಥಳೀಯವಾಗಿಯೂ ಖರೀದಿಸಲು ಸೂಚನೆ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.







